ದುಬೈ: ಜಂಟಲ್‌ಮೆನ್ಸ್ ಗೇಮ್ ಎಂದು ಕರೆಯುವ ಕ್ರಿಕೆಟ್‌ನಲ್ಲಿ ಆಗಾಗ ಪಾಸಿಟಿವ್ ಸಂಗತಿಗಳು ನಡೆಯುತ್ತಿರುತ್ತವೆ. ಅಂತೆಯೇ ಭಾರತ ಹಾಗೂ ಪಾಕಿಸ್ತಾನ ತಂಡಗಳ (IND vs PAK) ನಡುವೆ ಭಾನುವಾರ ನಡೆದ ಏಷ್ಯಾ ಕಪ್ ಪಂದ್ಯದ ವೇಳೆಯೂ ಅಂಥದ್ದೇ ಒಂದು ಸಂಗತಿ ಮುನ್ನೆಲೆಗೆ ಬಂದು ಕ್ರಿಕೆಟ್ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ. ಈ ಬಾರಿ ಕ್ರಿಕೆಟ್ ಕ್ಷೇತ್ರದ ಮನ ಗೆದ್ದಿರುವುದು ಪಾಕಿಸ್ತಾನದ ಬ್ಯಾಟರ್ ಫಖರ್ ಜಮಾನ್.
ಭಾರತದ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮಾಡಿದ ಅವರ ಬ್ಯಾಟ್‌ಗೆ ಆವೇಶ್ ಖಾನ್ ಎಸೆದ ಚೆಂಡು ತಗುಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಕೈ ಸೇರಿತ್ತು. ಅದು ಯಾರಿಗೂ ಗೊತ್ತಾಗಿರಲಿಲ್ಲ. ಆದೆರೆ, ಫಖರ್ ಜಮಾನ್ ಅಂಪೈರ್ ಔಟ್ ಕೊಡುವ ಮೊದಲೇ ಕ್ರೀಸ್ ಬಿಟ್ಟು ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.
ಈ ಪ್ರಸಂಗ ನಡೆದಿದ್ದು, ಇನಿಂಗ್ಸ್‌ನ ೫ನೇ ಓವರ್‌ನಲ್ಲಿ. ಆ ಓವರ್‌ನ ಕೊನೇ ಎಸೆತವನ್ನು ಅವೇಶ್ ಖಾನ್ ಬೌನ್ಸ್ ಮಾಡಿದ್ದಾರೆ. ಅದಕ್ಕೆ ಹೊಡೆಯಲು ಪ್ರಯತ್ನಿಸಿದ ಫಖರ್ ಅವರ ಬ್ಯಾಟ್ ಸ್ವಲ್ಪವೇ ತಾಗಿದ ಚೆಂಡು ದಿನೇಶ್ ಕಾರ್ತಿಕ್ ಕೈ ಸೇರಿದೆ. ಆದರೆ, ಕಾರ್ತಿಕ್ ಮತ್ತು ಆವೇಶ್ ಖಾನ್‌ಗೆ ವಿಷಯವೇ ಗೊತ್ತಾಗಲಿಲ್ಲ. ಆದರೆ, ಫಖರ್ ಏಕಾಏಕಿ ಕ್ರೀಸ್ ತೊರೆದರು. ಬಳಿಕ ಅಂಪೈರ್ ತೋರು ಬೆರಳೆತ್ತಿದರು.
ಆಗಲೇ ಪಾಕಿಸ್ತಾನ ತಂಡದ ಒಂದು ವಿಕೆಟ್ ಪತನಗೊಂಡಿದ್ದರಿಂದ ರನ್ ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಇಂಥ ಸಂದರ್ಭದಲ್ಲಿ ನೈಜ ಕ್ರೀಡಾ ಮೌಲ್ಯಕ್ಕೆ ಒತ್ತು ನೀಡುವುದು ದೊಡ್ಡತನ ಎಂದು ಸಾಕಷ್ಟು ನೆಟ್ಟಿಗರು ಹೊಗಳಿದ್ದಾರೆ.
ಇದನ್ನೂ ಓದಿ | IND vs PAK | ರಿಷಭ್ ಪಂತ್ ಇದ್ದರೂ ದಿನೇಶ್ ಕಾರ್ತಿಕ್ ಆಡುವ ಬಳಗದಲ್ಲಿ ಚಾನ್ಸ್ ಪಡೆದಿದ್ದು ಹೇಗೆ?