ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಪತ್ನಿ ಸಂಜನಾ ಗಣೇಶನ್(Sanjana Ganesan) ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ವಿಚಾರವನ್ನು ಜಸ್ಪ್ರೀತ್ ಬುಮ್ರಾ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ತಂದೆ ಯಾದ ಬುಮ್ರಾ ಅವರಿಗೆ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಆದರೆ ಕೆಲವು ನೆಟ್ಟಿಗರು ಮಾತ್ರ ಬುಮ್ರಾ ಅವರನ್ನು ಟೀಕಿಸಿ ಟ್ರೋಲ್ ಮಾಡಿದ್ದಾರೆ.
ಬುಮ್ರಾಗೆ ಬದ್ಧತೆ ಇಲ್ಲ ಎಂದ ನಟ್ಟಿಗರು
ಭಾರತ ತಂಡ ಏಷ್ಯಾಕಪ್ ನಿಮಿತ್ತ ಲಂಕಾದಲ್ಲಿ ಬೀಡುಬಿಟ್ಟಿದೆ. ಪಾಕಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಭಾರತಕ್ಕೆ ಸೂಪರ್-4 ಪ್ರವೇಶಕ್ಕೆ ನೇಪಾಳ ವಿರುದ್ಧ ಗೆಲ್ಲಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ತಂಡದ ಪ್ರಧಾನ ಆಟಗಾರನಾಗಿದ್ದ ಜಸ್ಪ್ರೀತ್ ಬುಮ್ರಾ ತಂದೆಯಾಗುವ ಖಷಿಯಲ್ಲಿ ನೇಪಾಳ ವಿರುದ್ಧ ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ದಿಢೀರ್ ಆಗಿ ತಂಡವನ್ನು ತೊರೆದು ಭಾರತಕ್ಕೆ ಬಂದಿದ್ದಾರೆ. ಇದೇ ವಿಚಾರದಲ್ಲಿ ನೆಟ್ಟಿಗರು ಬುಮ್ರಾ ಅವರಿಗೆ ಬದ್ಧತೆ ಇಲ್ಲ ಎಂದು 2015ರಲ್ಲಿ ಧೋನಿ(MS Dhoni) ತೆಗೆದುಕೊಂಡ ನಿರ್ಧಾರವನ್ನು ಮುಂದಿಟ್ಟು ಬುಮ್ರಾ ಅವರನ್ನು ಟ್ರೋಲ್ ಮಾಡಿದ್ದಾರೆ.
ಧೋನಿಯನ್ನು ನೋಡಿ ಕಲಿಯಬೇಕು
ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ 2015ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡದ ಸಂದರ್ಭ ಧೋನಿ ಅವರು ತಂಡವನ್ನು ಅರ್ಧಕ್ಕೆ ಬಿಟ್ಟು ಹೋಗಲು ನಿರಾಕರಿಸಿದ್ದರು. ಅದು ವಿಶ್ವಕಪ್ ಸಂದರ್ಭವಾಗಿತ್ತು ಅಂದು ಧೋನಿ “ನಾನೀಗ ರಾಷ್ಟ್ರೀಯ ಕರ್ತವ್ಯದಲ್ಲಿದ್ದೇನೆ. ಹಾಗಾಗಿ ಮನೆಗೆ ಹಿಂತಿರುಗುವುದಿಲ್ಲ. ನನ್ನ ತಂಡವನ್ನು ಮಧ್ಯದಲ್ಲಿ ಬಿಡುವುದಿಲ್ಲ” ಎಂದು ಹೇಳಿ ತಂಡದಲ್ಲಿ ಆಡುವುದನ್ನು ಮುಂದುವರೆಸಿದ್ದರು. ಆದರೆ ಬುಮ್ರಾ ಅವರು ಏಷ್ಯಾಕಪ್ ಅರ್ಧಕ್ಕೆ ಮೊಟಕುಗೊಳಿಸಿ ತಕ್ಷಣವೇ ಮಗು ನೋಡಲು ಹೊರಟು ಬಂದಿದ್ದಾರೆ. ಇದೇ ಕಾರಣಕ್ಕೆ ಧೋನಿ ಅವರ ಜತೆ ಬುಮ್ರಾರನ್ನು ಹೋಲಿಕೆ ಮಾಡಿದ್ದಾರೆ. ಬುಮ್ರಾಗೆ ತಂಡಕ್ಕಿಂತ ಕುಟುಂಬವೇ ಮುಖ್ಯ. ಅವರಿಗೆ ಬದ್ಧತೆಯಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಇದನ್ನೂ ಓದಿ Jasprit Bumrah: ಗಂಡು ಮಗುವಿನ ತಂದೆಯಾದ ಬುಮ್ರಾ; ಮಗುವಿಗೆ ಮುದ್ದಾದ ಹೆಸರಿಟ್ಟ ದಂಪತಿ
ಧೋನಿ ಜತೆಗಿನ ಹೋಲಿಕೆಯ ಟ್ವೀಟ್ ಇಲ್ಲಿದೆ
ಮಗುವಿನ ಹೆಸರು ಅಂಗದ್
ಮಗುವಿನ ಹೆಸರನ್ನು ಕೂಡ ಬುಮ್ರಾ ಅವರು ಬಹಿರಂಗಪಡಿಸಿದ್ದಾರೆ. ಮಗುವಿಗೆ ‘ಅಂಗದ್(Angad) ಜಸ್ಪ್ರೀತ್ ಬುಮ್ರಾ’ ಎಂದು ಹೆಸರಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ. “ಇಂದು ಮುಂಜಾನೆ ನಮ್ಮ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ನಾವೀಗ ಚಂದ್ರನ ಮೇಲೆ ತೇಲುತ್ತಿದ್ದೇವೆ. ಹೊಸ ಸದಸ್ಯರೊಂದಿಗೆ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಲು ಕಾತುರರಾಗಿದ್ದೇವೆ” ಎಂದು ಬುಮ್ರಾ ಬರೆದುಕೊಂಡಿದ್ದಾರೆ.
ಅಂಗದ್ ಹೆಸರಿನ ಅರ್ಥ
ಅಂಗದ್ ಎಂದರೆ ಯೋಧ ಎಂದರ್ಥ. ರಾಮಾಯಣದಲ್ಲಿ ಬರುವ ವಾಲಿಯ ಪುತ್ರನ ಹೆಸರು ಕೂಡ ಅಂಗದ್. ಇದೇ ಹೆಸರನ್ನು ಬುಮ್ರಾ ಅವರು ತಮ್ಮ ಮಗನಿಗೆ ಇಟ್ಟಿದ್ದಾರೆ. ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಮತ್ತು ಬುಮ್ರಾ ಅವರು 2021 ಮಾರ್ಚ್ 15ರಂದು ಗೋವಾದಲ್ಲಿ ಮದುವೆಯಾಗಿದ್ದರು. ಮಹಾರಾಷ್ಟ್ರದವರಾದ ಸಂಜನಾ 2014ರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ತಲುಪಿದ್ದರು.