ಅಹಮದಾಬಾದ್: ಭಾರತ ಹಾಗೂ ಆಸ್ಡ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಕೊನೇ ಪಂದ್ಯದ ಆರಂಭಕ್ಕೆ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi at Ahmedabad) ಅವರು ಸ್ಟೇಡಿಯಮ್ಗೆ ಭೇಟಿ ನೀಡಿದರು. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಟೋನಿ ಆಲ್ಬನೀಸ್ ಅವರೂ ಈ ವೇಳೆ ಹಾಜರಿದ್ದರು. ಭಾರತದ ಆಹ್ವಾನದ ಮೇರೆಗೆ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್ ಅವರು ಭಾರತಕ್ಕೆ ಭೇಟಿ ಕೊಟ್ಟಿದ್ದರು. ಅವರಿಬ್ಬರೂ ಪಂದ್ಯಕ್ಕೆ ಸಾಕ್ಷಿಯಾದರು. ಎರಡೂ ದೇಶಗಳ ಪ್ರಧಾನಿ ಪಂದ್ಯ ಆರಂಭಕ್ಕೆ ಮೊದಲು ಇತ್ತಂಡಗಳ ನಾಯಕರಿಗೆ ಕ್ಯಾಪ್ ನೀಡಿ ಅಭಿನಂದನೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಹಾಗೂ ಆಲ್ಬನೀಸ್ ರ್ಯಾಲಿ ನಡೆಸಿದರು.
ಮೋದಿ ಹಾಗೂ ಆಲ್ಬನೀಸ್ ಅವರು ಕ್ರೀಡಾಂಗಣಕ್ಕೆ ಒಂದು ಸುತ್ತು ಹೊಡೆದರು. ಸ್ಟೇಡಿಯಮ್ನ ಗ್ಯಾಲರಿಯಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಚಪ್ಪಾಳೆ ತಟ್ಟಿ ಮೋದಿಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಕೋಚ್ ಹಾಗೂ ಕಾಮೆಂಟೇಟರ್ ರವಿ ಶಾಸ್ತ್ರಿ , ಪ್ರಧಾನಿಗಳ ಉಪಸ್ಥಿತಿಯನ್ನು ಶ್ಲಾಘಿಸಿದರು.
ಇದೇ ವೇಳೆ ಆಟಗಾರರರು ರಾಷ್ಟ್ರಗೀತೆಯನ್ನು ಹಾಡುವಾಗ ಮೋದಿಯವರು ರೋಹಿತ್ ಶರ್ಮಾ ಪಕ್ಕದಲ್ಲೇ ನಿಂತು ರಾಷ್ಟ್ರಗೀತೆ ಹಾಡಿದರೆ, ಆಸೀಸ್ ಪ್ರಧಾನಿ ಆಂಟೋನಿ ಕೂಡ ತಮ್ಮ ಆಟಗಾರರ ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡಿದರು. ಇದೇ ಸಂದರ್ಭ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 75 ವರ್ಷಗಳ ಸ್ನೇಹವನ್ನು ಆಚರಿಸಲಾಯಿತು.