ಅಡಿಲೇಡ್ : ಕ್ರಿಕೆಟ್ ಅಭಿಮಾನಿಗಳ ಗುಂಪೊಂದು ತಮ್ಮನ್ನು ಹಾಗೂ ಇಬ್ಬರು ಪುಟಾಣಿ ಹೆಣ್ಣು ಮಕ್ಕಳನ್ನು ಮೈದಾನದಲ್ಲೇ ಛೇಡಿಸುವ ಮೂಲಕ ಅವಮಾನ ಮಾಡಿದೆ ಎಂಬುದಾಗಿ ಆಸ್ಟ್ರೇಲಿಯಾ ತಂಡದ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ (David Warner) ಅವರ ಪತ್ನಿ ಕ್ಯಾಂಡೈಸ್ ವಾರ್ನರ್ ಆರೋಪಿಸಿದ್ದಾರೆ. ಅಲ್ಲದೆ, ಕ್ರಿಕೆಟ್ ಸ್ಟೇಡಿಯಮ್ ಕೂಡ ತಮಗೆ ಸುರಕ್ಷಿತ ಸ್ಥಳವಲ್ಲ ಎಂಬ ಭಾವ ಉಂಟಾಗಿದೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ತಮಗೆ ಆಗಿರುವ ಅಪಮಾನ ಯಾರಿಗೂ ಆಗಬಾರದು ಎಂಬುದಾಗಿ ಕ್ಯಾಂಡೈಸ್ ಅವರು ಇದೇ ವೇಳೆ ನುಡಿದಿದ್ದಾರೆ. ಜತೆಗೆ ಮಕ್ಕಳು ತಮ್ಮ ಜತೆ ಇಲ್ಲದೇ ಹೋಗಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿತ್ತೂ ಎಂಬುದಾಗಿಯೂ ತಿಳಿಸಿದ್ದಾರೆ.
”ನಮ್ಮ ಎಂಟು ವರ್ಷದ ಹಾಗೂ ಮೂರು ವರ್ಷದ ಹೆಣ್ಣು ಮಕ್ಕಳ ಜತೆ ನಾನು ಅಡಿಲೇಡ್ ಓವಲ್ ಸ್ಟೇಡಿಯಮ್ಗೆ ಪಂದ್ಯ ವೀಕ್ಷಣೆಗೆ ತೆರಳಿದ್ದೆ. ಮಕ್ಕಳಿಗೆ ತಂದೆ ಆಡುವುದನ್ನು ನೋಡುವ ಅಭಿಲಾಷೆ ಉಂಟಾಗಿತ್ತು. ಹೀಗಾಗಿ ಅವರ ಕೈ ಹಿಡಿದುಕೊಂಡು ಮೈದಾನದಲ್ಲಿ ನಡೆಯುತ್ತಿದ್ದೆ. ಈ ವೇಳೆ ಗುಂಪೊಂದು ನಮ್ಮತ್ತ ನೋಡಿ ಹೀಯಾಳಿಸಲು ಶುರು ಮಾಡಿದೆ. ಆದರೂ ನಾನು ಮುಂದುವರಿದೆ. ಅವರ ವಿಕೃತಿ ಮುಂದುವರಿಯಿತು. ನಾನು ಗುಂಪಿನತ್ತ ತಿರುಗಿ ನೋಡಿದೆ. ಎಲ್ಲರೂ ಸುಮ್ಮನಾದರು. ಆದರೆ, ಒಬ್ಬ ಮಾತ್ರ ನನ್ನೆಡೆಗೆ ನೋಡಿ ವಿಚಿತ್ರ ವರ್ತನೆ ತೋರಿದ, ಎಂದು ಕ್ಯಾಂಡೈಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
”ನಾನು ನನ್ನ ಮಕ್ಕಳಿಗೆ ಸಮಾಧಾನ ಹೇಳಿದೆ. ಆದರೆ, ನಮಗೆ ಇದು ಸುರಕ್ಷಿತ ಸ್ಥಳವಲ್ಲ ಎಂಬ ಭಾವನೆ ಮೂಡಲು ಅದು ಕಾರಣವಾಯಿತು, ಎಂದು ಕಾಂಡೈಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡೇವಿಡ್ ವಾರ್ನರ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಡುವೆ ನಾಯಕತ್ವದ ಕುರಿತು ಚರ್ಚೆ ನಡೆಯುತ್ತಿದೆ. ತಮಗೆ ಆಜೀವ ನಾಯಕತ್ವ ನಿಷೇಧ ಮಾಡಿರುವ ಬಗ್ಗೆ ವಾರ್ನರ್ ಪ್ರಶ್ನೆಗಳನ್ನು ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ | Big Bash League | ಮಗಳು ಆಟ ನೋಡಬೇಕೆಂತೆ, ಅದಕ್ಕೆ ಇಲ್ಲೇ ಆಡುವೆ ಎಂದ ಡೇವಿಡ್ ವಾರ್ನರ್