Site icon Vistara News

ICC World Cup 2023 : ಲಾಟರಿ ಚಾಂಪಿಯನ್​ಗಳು; ನೆಟ್ಟಿಗರು ಇಂಗ್ಲೆಂಡ್​ ತಂಡವನ್ನು ಟ್ರೋಲ್ ಮಾಡಿದ್ಯಾಕೆ?

Afghanistan cricket team

ನವ ದೆಹಲಿ: ಅಫಘಾನಿಸ್ತಾನ ತಂಡದ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ (ICC World Cup 2023) ಇಂಗ್ಲೆಂಡ್ ತಂಡದ ಭೀಕರ ಸೋಲಿನ ನಂತರ ಟ್ರೋಲ್​ಗೆ ಒಳಗಾಯಿತು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್​ಗಳು ಇಂಗ್ಲೆಂಡ್ ಬ್ಯಾಟಿಂಗ್ ಲೈನ್ಅಪ್ ವಿರುದ್ಧ ವಿನಾಶಕಾರಿ ಪ್ರದರ್ಶನ ನೀಡಿದ ಕಾರಣ ಹಾಲಿ ಚಾಂಪಿಯನ್ ಆಂಗ್ಲರ ಪಡೆ ಒಟ್ಟು 285 ರನ್​ಗಳನ್ನು ಚೇಸ್ ಮಾಡಲು ವಿಫಲವಾಯಿತು. ಆಘಾತಕ್ಕೆ ಒಳಗಾಗಿರುವ ಇಂಗ್ಲೆಂಡ್​ ತಂಡವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಹೀಗಳೆದರು. ಕಳೆದ ಬಾರಿಯ ಲಾಟರಿ ಚಾಂಪಿಯನ್ ದುರ್ಬಲ ತಂಡದೊಂದಿಗೆ ಸೋತಿದೆ ಎಂದು ತಮಾಷೆ ಮಾಡಿದರು.

2019ರ ವಿಶ್ವ ಕಪ್​ ಫೈನಲ್​ನಲ್ಲಿ ಇಂಗ್ಲೆಂಡ್​ ತಂಡ ನ್ಯೂಜಿಲ್ಯಾಂಡ್ ತಂಡನವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು. ಅಂದ ಹಾಗೆ ಫೈನಲ್​ನಲ್ಲಿ ಪಂದ್ಯ ಟೈ ಆಗಿತ್ತು. ಬಳಿಕ ನಡೆದ ಸೂಪರ್ ಓವರ್​ ಕೂಡ ಟೈ ಆಗಿತ್ತು. ಬಳಿಕ ಅತ್ಯಧಿಕ ಬಾರಿ ಚೆಂಡನ್ನು ಬೌಂಡರಿ ಲೆಕ್ಕಾಚಾರದ ಪ್ರಕಾರ ಇಂಗ್ಲೆಂಡ್​ ತಂಡ ವಿಜೇತ ಎಂದು ಘೋಷಿಸಲಾಗಿತ್ತು. ಇದು ವಿಶ್ವ ಕಪ್ ಇತಿಹಾಸದ ಅತ್ಯಂತ ವಿವಾದಾತ್ಮಕ ಫಲಿತಾಂಶವಾಗಿದೆ. ಈ ಬಗ್ಗೆ ರನ್ನರ್​ಅಪ್​ ನ್ಯೂಜಿಲ್ಯಾಂಡ್​ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಅಫಘಾನಿಸ್ತಾನ ವಿರುದ್ದ ಅಭಿಮಾನಿಗಳು ಹಳೆಯ ಫಲಿತಾಂಶವನ್ನು ಸೇರಿಸಿಕೊಂಡು ಟೀಕೆ ಮಾಡಿದ್ದಾರೆ.

ಇದು ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್​ನಲ್ಲಿ (ICC World Cup 2023) ಅಚ್ಚರಿಯ ಫಲಿತಾಂಶವಾಗಿದೆ. ಹಾಲಿ ಚಾಂಪಿಯನ್​ (2019ರ ಏಕ ದಿನ ವಿಶ್ವಕಪ್​) ಇಂಗ್ಲೆಂಡ್ ತಂಡವನ್ನು ಕ್ರಿಕೆಟ್​ ಶಿಶು ಅಫಘಾನಿಸ್ತಾನ 69 ರನ್​ಗಳಿಂದ ಸೋಲಿಸಿ ಇತಿಹಾಸ ಬರೆದಿದೆ. ಇದರೊಂದಿಗೆ ಇಂಗ್ಲೆಂಡ್ ತಂಡ ಹಾಲಿ ಟೂರ್ನಿಯಲ್ಲಿ ಎರಡನೇ ಸೋಲಿಗೆ ಒಳಗಾಗಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹೀನಾಯ 9 ವಿಕೆಟ್​ ಹೀನಾಯ ಸೋಲಿಗೆ ಒಳಗಾಗಿದ್ದ ಇಂಗ್ಲೆಂಡ್​​, ಅಫಘಾನಿಸ್ತಾನ ವಿರುದ್ಧ ಮತ್ತೊಂದು ಆಘಾತ ಎದುರಿಸಿದೆ. ಇಂಗ್ಲೆಂಡ್​ ತಂಡ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 137 ರನ್​ಗಳ ಗೆಲುವು ದಾಖಲಿಸಿತ್ತು.

2019ರ ವಿಶ್ವ ಕಪ್​ ವೇಳೆ ಮ್ಯಾಂಚೆಸ್ಟರ್​ನಲ್ಲಿ ನಡೆದ ಪಂದ್ಯದಲ್ಲಿ 150 ರನ್​ಗಳ ಹೀನಾಯ ಸೋಲಿಗೆ ಒಳಗಾಗಿದ್ದ ಅಫಘಾನಿಸ್ತಾನ ತಂಡದ ಇದೀಗ ಆ ತಂಡವನ್ನು ಮಣಿಸಿ ಸೇಡು ತೀರಿಸಿಕೊಂಡಿದೆ. ಇಂಗ್ಲೆಂಡ್ ಹಾಗೂ ಅಪಘಾನಿಸ್ತಾನ ತಂಡ ಇದುವರೆಗೆ ಮೂರು ಬಾರಿ ಏಕ ದಿನ ಕ್ರಿಕೆಟ್​ನಲ್ಲಿ ಮುಖಾಮುಖಿಯಾಗಿವೆ. ಮೂರು ಪಂದ್ಯಗಳು ವಿಶ್ವ ಕಪ್​ನಲ್ಲಿ ಏರ್ಪಟ್ಟಿದ್ದವು. 2015ರಲ್ಲಿ ಹಾಗೂ 2019ರಲ್ಲಿ ಇಂಗ್ಲೆಂಡ್​ ಪಾರಮ್ಯ ಮೆರೆದಿದ್ದರೆ, ಇದೀಗ ನವ ದೆಹಲಿಯಲ್ಲಿ ಅಫಾನಿಸ್ತಾನ ತಂಡ ಸಂದರ್ಭೋಚಿತ ಪ್ರದರ್ಶನ ನೀಡಿ ಗೆದ್ದು ಸಂಭ್ರಮಿಸಿತು. ಈ ಫಲಿತಾಂಶವನ್ನು ಕ್ರಿಕೆಟ್ ಪಂಡಿತರು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕ್ರಿಕೆಟ್​ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಫಲಿತಾಂಶವೇ ಮತ್ತೊಂದು ಸಾಕ್ಷಿ ಎನಿಸಿತು.

ಇದನ್ನೂ ಓದಿ : ind vs Pak : ಟೀಮ್ ಇಂಡಿಯಾ ಡ್ರೆಸಿಂಗ್​ ರೂಮ್​ನಲ್ಲಿ ರಾಹುಲ್​ಗೆ ಸಿಕ್ತು ವಿಶೇಷ ಪ್ರಶಸ್ತಿ

ಇಲ್ಲಿನ ಅರುಣ್​ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ಗೆ ಪೂರಕವಾಗಿರುವ ಪಿಚ್​ನಲ್ಲಿ ಚೇಸ್ ಮಾಡಿ ಗೆಲ್ಲುವುದು ಸುಲಭ ಎಂಬ ಲೆಕ್ಕಾಚಾರದೊಂದಿಗೆ ಈ ನಿರ್ಧಾರ ತೆಗೆದುಕೊಂಡಿತು. ಜತೆಗೆ ಅಫಘಾನಿಸ್ತಾನ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಉದ್ದೇಶ ಹೊಂದಿತ್ತು. ಆಂತೆಯೇ ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ 49.5 ಓವರ್​ಗಳಲ್ಲಿ 284 ರನ್ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 40.3 ಓವರ್​ಗಳಲ್ಲಿ 215 ರನ್​ಗಳಿಗೆ ಆಲ್​ಔಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತು.

Exit mobile version