ಕೋಲ್ಕೋತಾ: ಈಗಾಗಲೇ ಸೆಮಿಫೈನಲ್ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ತಂಡಗಳು ಇಂದು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಹೈವೋಲ್ಟೇಜ್ ಎಂದು ನಿರೀಕ್ಷೆ ಮಾಡಿ ಕಾದು ಕುಳಿತ ಅಭಿಮಾನಿಗಳಿಗೆ ಹವಾಮಾನ ವರದಿ ನಿರಾಸೆಯನ್ನುಂಟುಮಾಡುವ ಸುದ್ದಿಯನ್ನು ನೀಡಿದೆ. ಈ ಪಂದ್ಯಕ್ಕೆ ಮಳೆಯ ಭೀತಿ ಇದೆ ಎಂದು ಮುನ್ಸೂಚನೆ ನೀಡಿದೆ.
ಶೇ.31 ಮಳೆ ಸಾಧ್ಯತೆ
ಕೋಲ್ಕೋತಾದಲ್ಲಿ ಭಾನುವಾರ ರಾತ್ರಿಯ ವೇಳೆ ಶೇ 31ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಒಂದು ಇನಿಂಗ್ಸ್ ನಡೆದರೂ ಇನ್ನೊಂದು ಇನಿಂಗ್ಸ್ ನಡೆಯುವುದು ಅನುಮಾನ ಎನ್ನಲಾಗಿದೆ. ಅಲ್ಲದೆ ಇಲ್ಲಿ ಮಳೆ ಬಂದರೆ ಆ ಬಳಿಕ ಮಂಜಿನ ಕಾಟ ತಪ್ಪಿದ್ದಲ್ಲ. ಹೀಗಾಗಿ ಮಳೆ ಬಂದರೆ ಪಂದ್ಯ ರದ್ದಾಗುವುದು ಖಚಿತ.
ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೂ ಉಭಯ ತಂಡಗಳಿಗೆ ಯಾವುದೇ ನಷ್ಟ ಸಂಭವಿಸದು. ಕಾರಣ ಈಗಾಗಲೇ ಇತ್ತಂಡಗಳು ಸೆಮಿಫೈನಲ್ ಪ್ರವೇಶ ಗಿಟ್ಟಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡ ಶನಿವಾರ ಪಾಕಿಸ್ತಾನ ವಿರುದ್ಧ ಕಿವೀಸ್ ಸೋಲು ಕಂಡ ಕಾರಣದಿಂದ ಸೆಮಿ ಟಿಕೆಟ್ ಪಡೆಯಿತು.
ವಿಶ್ವಕಪ್ ಮುಖಾಮುಖಿ
ಉಭಯ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಬಲಾಬಲದಲ್ಲಿ ದಕ್ಷಿಣ ಆಫ್ರಿಕಾವೇ ಮುಂದಿದೆ. 5 ಬಾರಿ ಮುಖಾಮುಖಿಯಾಗಿ ಮೂರಲ್ಲಿ ಗೆಲುವು ಸಾಧಿಸಿದೆ. ಭಾರತ ಗೆದ್ದಿದ್ದು 2 ಪಂದ್ಯ ಮಾತ್ರ ಅದು ಕೂಡ ಇತ್ತೀಚಿನ ವಿಶ್ವಕಪ್ ಟೂರ್ನಿಯಲ್ಲಿ. 2015 ಮತ್ತು ಕಳೆದ 2019ರ ವಿಶ್ವಕಪ್ನಲ್ಲಿ. ಇದಕ್ಕೂ ಮುನ್ನ ಆಡಿದ ಮೂರೂ ಪಂದ್ಯಗಳಲ್ಲಿಯೂ ಭಾರತ ಹೀನಾಯ ಸೋಲು ಕಂಡಿತ್ತು. ಇತ್ತಂಡಗಳು ಮೊದಲ ವಿಶ್ವಕಪ್ ಪಂದ್ಯ ಆಡಿದ್ದು 1992ರಲ್ಲಿ. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ 6 ವಿಕೆಟ್ಗಳಿಂದ ಗೆದ್ದಿತ್ತು.
ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್‌ನ(Eden Gardens) ಪಿಚ್ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಇಲ್ಲಿ ಚೇಸಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಅವಕಾಶ ಏಕೆಂದರೆ ರಾತ್ರಿಯ ವೇಳೆ ಇಲ್ಲಿ ಇಬ್ಬನಿ ಸಮಸ್ಯೆ ಕಾಡಲಿದೆ. ಇದು ಬೌಲರ್ಗಳಿಗೆ ಕಷ್ಟಕರವಾಗಲಿದೆ. ಕೈಯಲ್ಲಿ ಸರಿಯಾಗಿ ಚೆಂಡು ನಿಲ್ಲದೆ ನಿರ್ದಿಷ್ಟ ಗುರಿಗೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ.
ಇದನ್ನೂ ಓದಿ ಆಸೀಸ್-ಪಾಕ್ಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ; ಬವುಮಾ ಪಡೆ ಸೆಮಿಗೆ ಲಗ್ಗೆ
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಸ್ಸಿ ವಾನ್ ಡರ್ ಡುಸೆನ್, ಐಡೆನ್ ಮಾರ್ಕ್ರಮ್, ಟೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ, ಜೆರಾಲ್ಡ್ ಕೋಟ್ಜಿ.