Site icon Vistara News

IPL 2024: ‘ಯಾವ ಪರಿಣಾಮವೂ ಬೀರಲ್ಲ’; ತಂಡ ತೊರೆದ ಹಾರ್ದಿಕ್​ಗೆ ಟಾಂಗ್​ ನೀಡಿದ ಶಮಿ

Hardik Pandya

ಮುಂಬಯಿ: ಹಾರ್ದಿಕ್​ ಪಾಂಡ್ಯ(Hardik Pandya) ಈ ಬಾರಿಯ ಐಪಿಎಲ್(IPL 2024)​ ಟ್ರೇಡ್​ನಲ್ಲಿ ಗುಜರಾತ್(Gujarat Titans)​ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್​ ತಂಡ ಸೇರಿದ್ದರಿಂದ ನಮ್ಮ ತಂಡಕ್ಕೆ ಯಾವುದೇ ಹಿನ್ನೆಡೆಯಾಗಿಲ್ಲ ಎಂದು ಮೊಹಮ್ಮದ್​ ಶಮಿ(Mohammed Shami) ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶಮಿ, “ಒಬ್ಬ ಆಟಗಾರ ತಂಡ ತೊರೆದ ತಕ್ಷಣ ತಂಡಕ್ಕೆ ಯಾವ ಪರಿಣಾಮವೂ ಬೀರಲ್ಲ. ಹಾರ್ದಿಕ್ ಇದ್ದಾಗ, ಉತ್ತಮವಾಗಿ ನಾಯಕತ್ವ ವಹಿಸಿದ್ದರು. ಅವರು ಎರಡೂ ಆವೃತ್ತಿಗಳಲ್ಲಿ ತಂಡವನ್ನು ಫೈನಲ್‌ ತಲುಪಿಸಿದ್ದರು. ಆದರೆ, ಗುಜರಾತ್ ಹಾರ್ದಿಕ್ ಅವರನ್ನೇ ನಂಬಿ ಕೂತಿಲ್ಲ. ತಂಡದಲ್ಲಿ ಇರುವುದು ಬಿಡುವುದು ಅವರ ನಿರ್ಧಾರ. ಶುಭಮನ್‌ಗೆ ಈಗ ನಾಯಕನ ಸ್ಥಾನ ನೀಡಲಾಗಿದೆ. ಮುಂದೊಂದು ದಿನ ಅವರೂ ಕೂಡ ಬೇರೆ ತಂಡಕ್ಕೆ ಹೋಗಬಹುದು. ಇದು ಆಟದ ಒಂದು ಭಾಗವಾಗಿದೆ. ಆಟಗಾರರು ಬರುತ್ತಾರೆ ಮತ್ತು ಹೋಗುತ್ತಾರೆ” ಎಂದು ಹೇಳುವ ಮೂಲಕ ತಂಡ ತೊರೆದ ಹಾರ್ದಿಕ್​ಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

“ಹಾರ್ದಿಕ್​ ತಂಡ ತೊರೆದರೆಂದು ಚಿಂತಿಸುವ ಅಗತ್ಯವಿಲ್ಲ. ಶುಭಮನ್​ ಗಿಲ್​ ಉತ್ತಮವಾಗಿ ತಂಡವನ್ನು ಮುನ್ನಡೆಸುವ ವಿಶ್ವಾಸವಿದೆ. ಯುವ ಆಟಗಾರನಾದ ಕಾರಣ ಅವರಿಗೆ ಆರಂಭದಲ್ಲಿ ಕೊಂಚ ಕಷ್ಟ ಎನಿಸಬಹುದು ಆದರೆ, ತಂಡದ ಆಟಗಾರರು ಅವರ ಹೊರೆಯನ್ನು ಕಡಿಮೆ ಮಾಡುವ ಎಲ್ಲ ವಿಶ್ವಾಸ ನನಗಿದೆ” ಎಂದು ಶಮಿ ಹೇಳಿದರು.

ಹಿಂದೊಮ್ಮೆ ಶಮಿ ಅವರು ಗೌರವ್​ ಕಪೂರ್​ ಜತೆಗಿನ ಪಾಡ್​ಕಾಸ್ಟ್​ನಲ್ಲಿ ಹಾರ್ದಿಕ್​ ಪಾಂಡ್ಯ(hardik pandya) ಅವರ ಅತಿರೇಕದ ವರ್ತನೆಯಿಂದ ತುಂಬಾ ಬೇಸರವಾಗಿತ್ತು ಎಂದು ಹೇಳಿದ್ದರು. ಹಾರ್ದಿಕ್ ತನ್ನ ಮೇಲೆ ವಾಗ್ದಾಳಿ ನಡೆಸಿದ್ದನ್ನು ನೋಡಿದಾಗ ನನಗೆ ಸರಿ ಎನಿಸಲಿಲ್ಲ. ಮೈದಾನದಲ್ಲಿ ಯಾವುದೇ ಆಟಗಾರನ ಮೇಲೆ ಕ್ಯಾಮೆರಾ ಮುಂದೆ ರೇಗುವುದು ನನಗೆ ಇಷ್ಟವಿಲ್ಲ. ಪಂದ್ಯ ಮುಕ್ತಾಯದ ಬಳಿಕ ನಾನು ಹಾರ್ದಿಕ್ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಈ ಬಗ್ಗೆ ತೀಕ್ಷ್ಣ ಮಾತುಗಳಿಂದಲೇ ಉತ್ತರಿಸಿದೆ ಎಂದು ಶಮಿ ಹೇಳಿದ್ದರು. ಅಂದಿನ ಪಂದ್ಯದಲ್ಲಿ ಶಮಿ ಅವರು ಮಿಸ್​ ಫೀಲ್ಡಿಂಗ್​ ನಡೆಸಿದ್ದರು. ಇದೇ ವೇಳೆ ಕೋಪಗೊಂಡ ಹಾರ್ದಿಕ್​ ಪಾಂಡ್ಯ ಅವರು ಶಮಿ ಅವರ ಮೇಲೆ ರೇಗಾಡಿದ್ದರು. ಇದು ಫೀಲ್ಡ್​ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ IPL 2024 : ಸಂಕ್ರಾತಿ ಹಿನ್ನೆಲೆಯಲ್ಲಿ ಐಪಿಎಲ್​ ತಂಡಗಳ ಗಾಳಿಪಟ ಸಮರ, ಇಲ್ಲಿದೆ ನೋಡಿ ವಿಡಿಯೊ

ವಿಶ್ವಕಪ್​ನಲ್ಲಿ ಅಮೋಘ ಸಾಧನೆ


ಕಳೆದ ವರ್ಷ ನಡೆದ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್​ ಮುಂದೆ ಎದುರಾಳಿ ತಂಡದ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದ್ದರು.​ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬರೋಬ್ಬರಿ 7 ವಿಕೆಟ್​ ಉರುಳಿಸಿದ್ದರು.

Exit mobile version