ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಅಝರ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಶುಕ್ರವಾರ(ಡಿಸೆಂಬರ್ 16) ವಿದಾಯ ಘೋಷಿಸಿದ್ದಾರೆ. ಇಂಗ್ಲೆಂಡ್(PAK VS ENG) ವಿರುದ್ಧ ಕರಾಚಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವು ಅಝರ್ ಅಲಿ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೆನಿಸಿಕೊಳ್ಳಲಿದೆ.
“ನನ್ನ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಲು ಅವಕಾಶ ದೊರೆತದ್ದು ನನ್ನ ಪಾಲಿನ ಸೌಭಾಗ್ಯವೆಂದು ಭಾವಿಸುತ್ತೇನೆ. ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯಂತ ಕಠಿಣ ಕ್ಷಣ. ಆದರೂ ವಿದಾಯ ಎನ್ನುವುದು ಎಲ್ಲ ಆಟಗಾರನ ಜೀವನದಲ್ಲಿ ಬರುತ್ತದೆ. ಆದ್ದರಿಂದ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸುವುದು ಇದು ಸರಿಯಾದ ಕ್ಷಣವೆಂದು ಭಾವಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಅಝರ್ ಅಲಿ ಹೇಳಿದ್ದಾರೆ.
37 ವರ್ಷದ ಅಝರ್ ಅಲಿ 2016ರಿಂದ 2020ರ ಅವಧಿಯಲ್ಲಿ ಒಟ್ಟು 9 ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದರು. 2018ರಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಪಾಕ್ ಪರ ಅಝರ್ ಇದುವರೆಗೂ 96 ಟೆಸ್ಟ್ ಪಂದ್ಯಗಳನ್ನಾಡಿ 7,097 ರನ್ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಯೂನಿಸ್ ಖಾನ್(10,099) ಹೆಸರಿನಲ್ಲಿದೆ. ಇನ್ನುಳಿದಂತೆ ಜಾವೆದ್ ಮಿಯಾಂದಾದ್(8,832), ಇಂಜಮಾಮ್ ಉಲ್ ಹಕ್(8,829) ಹಾಗೂ ಮೊಹಮ್ಮದ್ ಯೂಸುಫ್(7,530) ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ.
ಇದನ್ನೂ ಓದಿ | Pakistan Cricket Team | ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ದೊರೆತ ದಿನವೇ ತಾಯಿಯನ್ನು ಕಳೆದುಕೊಂಡ ಪಾಕ್ ಬೌಲರ್