ನವ ದೆಹಲಿ: ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್ (Asia Cup 2023) ಪ್ರಸ್ತುತ ಕ್ರಿಕೆಟ್ ಕಾರಿಡಾರ್ನಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ. ಭಯೋತ್ಪಾದಕ ಚಟುವಟಿಕೆಗಳ ಉಗಮ ಸ್ಥಾನವಾಗಿರುವ ಪಾಕಿಸ್ತಾನಕ್ಕೆ ಹೋಗಿ ಕ್ರಿಕೆಟ್ ಆಡಲು ನಾವು ತಯಾರಿಲ್ಲ ಎಂದು ಬಿಸಿಸಿಐ ಹೇಳುತ್ತಿದ್ದರೆ, ನಮಗೆ ಆತಿಥ್ಯ ಕೊಟ್ಟಿರುವ ಕಾರಣ ನಮ್ಮ ದೇಶದಲ್ಲೇ ಟೂರ್ನಿ ನಡೆಯಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಟ್ಟು ಹಿಡಿದಿದೆ. ಆದರೆ, ಬಿಸಿಸಿಐ ತನ್ನ ಪಟ್ಟು ಸಡಿಲಿಕೆ ಮಾಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಪಾಕಿಸ್ತಾನ ಒಬ್ಬೊಬ್ಬರೇ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಅವರ ಪಟ್ಟಿಗೆ ಈಗ ಪಾಕಿಸ್ತಾನದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಸೇರ್ಪಡೆಗೊಂಡಿದ್ದು, ಐಸಿಸಿಯ ನಿಯಮ ಪಾಲನೆ ಮಾಡದ ಬಿಸಿಸಿಐನ ಸದಸ್ಯತ್ವ ರದ್ದು ಮಾಡಬೇಕು ಎಂದು ಹೇಳಿದ್ದಾರೆ.
ಭಾರತ ನಮ್ಮ ದೇಶಕ್ಕೆ ಬರುವುದಿಲ್ಲ ಎಂಬುದಾಗಿ ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಹಾಗೆಂದು ಅವರು ಬಂದಿಲ್ಲವೆಂದು ನಾವು ಚಿಂತೆ ಮಾಡಬೇಕಾಗಿಲ್ಲ. ನಮ್ಮ ಕ್ರಿಕೆಟ್ಗೆ ಅದರಿಂದ ಯಾವುದೇ ನಷ್ಟವಿಲ್ಲ. ಇಂಥವನ್ನೆಲ್ಲ ಐಸಿಸಿ ನಿಯಂತ್ರಣ ಮಾಡಬೇಕಾಗಿದೆ. ಅವರು ಮಾಡಿಲ್ಲ ಎಂದಾದರೆ ಒಂದು ಆಡಳಿತ ಮಂಡಳಿಯಿದ್ದು ಯಾವುದೇ ಪ್ರಯೋಜನ ಇರುವುದಿಲ್ಲ ಎಂದ ಹೇಳಿದ್ದಾರೆ.
ಐಸಿಸಿ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಒಂದೇ ನಿಯಮವನ್ನು ಹೊಂದಿರಬೇಕು. ಯಾರು ಸಮರ್ಥರು, ಯಾರು ದುರ್ಬಲರು ಎಂಬುದರ ಮೇಲೆ ನಿಯಮಗಳು ಅನ್ವಯವಾಗುತ್ತಿದೆ ಎಂದಾದರೆ ಅಂಥ ಸಂಸ್ಥೆಗಳು ಇದ್ದೂ ಪ್ರಯೋಜನ ಇಲ್ಲ ಎಂದು ಮಿಯಾಂದಾದ್ ಹೇಳಿದ್ದಾರೆ.
ಭಾರತ ತಂಡಕ್ಕೆ ನಮ್ಮ ದೇಶಕ್ಕೆ ಬರುವುದಕ್ಕೆ ಸಾಕಷ್ಟು ಭಯವಿದೆ. ಯಾಕೆಂದರೆ ಇಲ್ಲಿಗೆ ಬಂದರೆ ಅವರು ಸೋಲುತ್ತಾರೆ. ನಮ್ಮ ಎದುರಿನ ಸೋಲನ್ನು ಅಲ್ಲಿನ ಅಭಿಮಾನಿಗಳು ಸಹಿಸಿಕೊಳ್ಳುವುದಿಲ್ಲ. ಅವರ ಮೇಲೆಯೇ ದಾಳಿ ಮಾಡುತ್ತಾರೆ ಮಿಯಾಂದಾದ್ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : Asia Cup 2023 : ಏಷ್ಯಾ ಕಪ್ ಕ್ರಿಕೆಟ್ ಪಾಕಿಸ್ತಾನದಲ್ಲಿ ನಡೆಯದಂತೆ ನೋಡಿಕೊಂಡ ಜಯ್ ಶಾ!
ನಮ್ಮ ಕಾಲದದಿಂದಲೂ ಭಾರತ ತಂಡಕ್ಕೆ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡುವುದೆಂದರೆ ಭಯ. ಒಂದು ವೇಳೆ ಆಡಿ ಸೋತರೆ ಅಲ್ಲಿನ ಅಭಿಮಾನಿಗಳು ಸಹಿಸಿಕೊಳ್ಲುತ್ತಿರಲಿಲ್ಲಿ. ಅಲ್ಲಿನ ಕ್ರಿಕೆಟಿಗರ ಮನೆಗೆ ಬೆಂಕಿ ಹಚ್ಚುತ್ತಿದ್ದರು ಎಂದು ಮಿಯಾಂದಾದ್ ಹೇಳಿದ್ದಾರೆ.