Site icon Vistara News

T2O World Cup | ಫೈನಲ್‌ಗೆ ಮಳೆಯ ಆತಂಕ, ಪಂದ್ಯದ ಹೆಚ್ಚುವರಿ ಅವಧಿ 4 ಗಂಟೆ ವಿಸ್ತರಣೆ

t20 world cup

ಮೆಲ್ಬೋರ್ನ್‌ : ಭಾನುವಾರ ನಿಗದಿಯಾಗಿರುವ ಟಿ೨೦ ವಿಶ್ವ ಕಪ್‌ನ ಫೈನಲ್ (T2O World Cup) ಪಂದ್ಯಕ್ಕೆ ಮಳೆಯ ಆತಂಕ ಉಂಟಾಗಿದೆ. ಮೀಸಲು ದಿನವಾದ ಸೋಮವಾರ ಕೂಡ ದಿನವಿಡೀ ಮಳೆ ಬರಬಹುದು ಎಂದು ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಹೀಗಾಗಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್‌ ನಡುವಿನ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಐಸಿಸಿ ನಿಯಮದ ಪ್ರಕಾರ ಒಂದು ವೇಳೆ ಮೀಸಲು ದಿನದಂದೂ ಮಳೆ ನಡೆಯದೇ ಹೋದರೆ ಟ್ರೋಫಿಯನ್ನು ಇತ್ತಂಡಗಳು ಹಂಚಿಕೊಳ್ಳಬೇಕಾಗಿದೆ.

ಮಳೆ ಬರುವುದು ಖಚಿತ ಎಂದು ಅರಿತಿರುವ ಐಸಿಸಿ ಪರ್ಯಾಯ ಮಾರ್ಗಗಳನ್ನು ಪತ್ತೆ ಹಚ್ಚುತ್ತಿದೆ. ಅದರೆ, ಮಳೆಯಿಂದ ಆಗುವ ಅಡಚಣೆಗೆ ಬೇರೆ ಮಾರ್ಗ ಹುಡುಕುವುದು ಸಾಧ್ಯವಿಲ್ಲ. ಯಾಕೆಂದರೆ ಟೂರ್ನಿ ಆರಂಭವಾದ ದಿನದಿಂದಲೂ ಮೆಲ್ಬೋರ್ನ್‌ನಲ್ಲಿ ನಿರಂತವಾಗಿ ಮಳೆ ಬರುತ್ತಿದೆ. ಅದರಿಂದಲೇ ಮೂರು ಪಂದ್ಯಗಳು ರದ್ದಾಗಿವೆ ಹಾಗೂ ಆತಿಥೇಯ ಆಸ್ಟ್ರೇಲಿಯಾ ಗುಂಪು ಹಂತದಿಂದಲೇ ಟೂರ್ನಿಯಿಂದ ನಿರ್ಗಮಿಸಿದೆ. ಇವೆಲ್ಲದರ ನಡುವೆ ಹೇಗಾದರೂ ಮಾಡಿ ಫೈನಲ್‌ ನಡೆಸುವ ಉದ್ದೇಶದಿಂದ ಐಸಿಸಿ ಫೈನಲ್‌ ಪಂದ್ಯದ ಕೆಲವು ನಿಯಮಗಳಲ್ಲಿ ಮಾರ್ಪಾಟು ಮಾಡಿದ್ದು, ಆ ಬಗ್ಗೆ ಪ್ರಕಟಣೆ ಹೊರಡಿಸಿದೆ.

ಭಾನುವಾರ ಫೈನಲ್ ಪಂದ್ಯಕ್ಕೆ ನಿಗದಿತ ದಿನವಾಗಿದೆ. ಒಂದು ವೇಳೆ ಅಂದು ಪಂದ್ಯ ನಡೆಯದಿದ್ದರೆ ಸೋಮವಾರದ ಮೀಸಲು ದಿನವಿದೆ. ಅಂತೆಯೇ ಮೀಸಲು ದಿನದಂದು ನಿಗದಿತ ಸಮಯದಲ್ಲಿ ಪಂದ್ಯ ನಡೆಸಲು ಸಾಧ್ಯವಾಗದೇ ಹೋದರೆ ಎರಡು ಗಂಟೆ ಅವಧಿ ವಿಸ್ತರಣೆ ಮಾಡಲು ಅವಕಾಶವಿತ್ತು. ಇದೀಗ ಆ ಅವಧಿಯನ್ನೂ ೪ ಗಂಟೆಗಳಿಗೆ ವಿಸ್ತರಿಸಲಾಗಿದೆ.

ಶನಿವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಐಸಿಸಿ, ಪಂದ್ಯವನ್ನು ನಡೆಸಲು ಗರಿಷ್ಠ ಪ್ರಯತ್ನಗಳನ್ನು ನಡೆಸಲಾಗುವುದು. ಒಂದು ವೇಳೆ ನಿಗದಿತ ಅವಧಿಯಲ್ಲಿ ಪಂದ್ಯ ನಡೆಸಲು ಸಾಧ್ಯವಾಗದೇ ಹೋದರೆ ೪ ಗಂಟೆಗಳ ವಿಸ್ತರಣೆ ಅವಕಾಶ ಕೊಡಲಾಗಿದೆ ಎಂದು ಹೇಳಿದೆ.

ಐಸಿಸಿ ಈ ಹಿಂದೆ ಹೇಳಿರುವ ಪ್ರಕಾರ ಕನಿಷ್ಠ ಪಕ್ಷ ೧೦ ಓವರ್‌ಗಳ ಇನಿಂಗ್ಸ್‌ ನಡೆಸಲೇಬೇಕಾಗಿದೆ. ಹೀಗಾಗಿ ಒಟ್ಟು ೨೦ ಓವರ್‌ಗಳ ಮ್ಯಾಚ್‌ ನಡೆಯಲೇಬೇಕು. ಇಲ್ಲದೇ ಹೋದರೆ ಪಂದ್ಯದ ಫಲಿತಾಂಶವನ್ನು ಪ್ರಕಟಿಸಲಾಗುವುದಿಲ್ಲ. ಎರಡೂ ದಿನದಲ್ಲಿ ಕನಿಷ್ಠ ಓವರ್‌ಗಳ ಪಂದ್ಯ ನಡೆಸಲು ಸಾಧ್ಯವಾಗದೇ ಹೋದರೆ ಟ್ರೋಫಿಯನ್ನು ಹಂಚಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ | Virat kohli | ಅಡಿಲೇಡ್‌ನ ಮಹಿಳೆಯರ ಹಾಕಿ ತಂಡದೊಂದಿಗೆ ಕಾಣಿಸಿಕೊಂಡ ವಿರಾಟ್‌ ಕೊಹ್ಲಿ

Exit mobile version