ಭುವನೇಶ್ವರ: ಮೂರು ವರ್ಷದ ಬಳಿಕ ತವರಿನಲ್ಲಿ ನಡೆಯುವ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕೆ ಇಳಿಯಲು ಸಜ್ಜಾದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಮತ್ತು ಕಿಶೋರ್ ಜೇನಾ(Kishore Jena) ಅವರು ಈ ಟೂರ್ನಿಯಲ್ಲಿ ನೇರವಾಗಿ ಫೈನಲ್ ಪ್ರವೇಶ ಪಡೆದಿದ್ದಾರೆ. ಇಂದು ಅರ್ಹತಾ ಸುತ್ತಿನ ಸ್ಪರ್ಧೆ ನಡೆಯಲಿದ್ದು ಬುಧವಾರ ಫೈನಲ್ ನಡೆಯಲಿದೆ.
ನೀರಜ್ ಚೋಪ್ರಾ ಮತ್ತು ಜೇನಾ ಈಗಾಗಲೇ ಹಲವು ಬಾರಿ ಅರ್ಹತಾ ಮಟ್ಟ (75 ಮೀಟರ್) ದಾಟಿರುವುದರಿಂದ ಉಭಯ ಜಾವೆಲಿನ್ ಪಟುಗಳಿಗೆ ನೇರವಾಗಿ ಫೈನಲ್‌ಗೆ ಅರ್ಹತೆ ನೀಡಲಾಯಿತು. ನಾಳೆ ಇವರಿಬ್ಬರು ಫೈನಲ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವಾರ ನಡೆದ ಡೈಮಂಡ್ ಲೀಗ್‌ನ ದೋಹಾ ಲೆಗ್‌ನಲ್ಲಿ ಚೋಪ್ರಾ 88.36 ಮೀ ದೂರ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದಿದ್ದರು. ಏಷ್ಯನ್ ಕ್ರೀಡಾಕೂಟದ ಬೆಳ್ಳಿ ವಿಜೇತ ಜೇನಾ ಈ ಬಾರಿ ಡೈಮಂಡ್ ಲೀಗ್‌ಗೆ ಚೊಚ್ಚಲ ಪ್ರವೇಶ ಮಾಡಿ, 76.31 ಮೀ ದೂರ ಎಸೆದಿದ್ದರು.
ಕರ್ನಾಟಕದ ಡಿ.ಪಿ. ಮನು ಕೂಡ ಫೆಡರೇಷನ್ ಕಪ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. 2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮನು ಆರನೇ ಸ್ಥಾನ ಪಡೆದಿದ್ದರು.
26 ವರ್ಷದ ನೀರಜ್ ಜೂನ್ 18ರಂದು ಫಿನ್ಲ್ಯಾಂಡ್ನ ಪಾವೊ ನುರ್ಮಿ ಗೇಮ್ಸ್ನಲ್ಲೂ ಸ್ಪರ್ಧಿಸಲಿದ್ದಾರೆ. ಈ ಟೂರ್ನಿಯಲ್ಲಿ 90 ಮೀ. ಗಡಿ ದಾಟಲು ಅವರು ಪಣ ತೊಟ್ಟಿದ್ದಾರೆ.
ಇದನ್ನೂ ಓದಿ Neeraj Chopra: ಪ್ಯಾರಿಸ್ ಒಲಿಂಪಿಕ್ಸ್ಗೆ ಮುನ್ನ 90 ಮೀಟರ್ ಗಡಿ ದಾಟುವೆ; ನೀರಜ್ ಚೋಪ್ರಾ ವಿಶ್ವಾಸ
ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಈ ಬಾರಿಯೂ ಚಿನ್ನ ಗೆಲ್ಲಲಿ ಎನ್ನುವುದು ಶತ ಕೋಟಿ ಭಾರತೀಯರ ಆಶಯ ಮತ್ತು ಹಾರೈಕೆಯಾಗಿದೆ. 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.