ನವದೆಹಲಿ: ನೂತನ ಫಿಫಾ ಶ್ರೇಯಾಂಕದಲ್ಲಿ(Fifa Ranking) ಭಾರತ ಒಂದು ಸ್ಥಾನದ ಏರಿಕೆ ಕಂಡು ಅಗ್ರ ನೂರರಲ್ಲಿ ಸ್ಥಾನ ಸಂಪಾದಿಸಿದೆ. ಇದು ಭಾರತ ಕಳೆದ 5 ವರ್ಷಗಳ ಬಳಿಕ ಸಾಧಿಸಿದ ಶ್ರೇಷ್ಠ ಪ್ರಗತಿಯಾಗಿದೆ. ಸದ್ಯ ಭಾರತ ತಂಡ 100ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಫಿಫಾ ಚಾಂಪಿಯನ್ ಲಿಯೋನಲ್ ಮೆಸ್ಸಿ (lionel messi)ಸಾರಥ್ಯದ ಅರ್ಜೆಂಟೀನಾ(Argentina) ತಂಡ ನಂ.1 ಸ್ಥಾನದಲ್ಲಿ ಮುಂದುವರಿದಿದೆ.
ಇಂಟರ್‌ಕಾಂಟಿನೆಂಟಲ್ ಟೂರ್ನಿಯಲ್ಲಿ ಹಾಗೂ ಪ್ರಸಕ್ತ ನಡೆಯುತ್ತಿರುವ ಸ್ಯಾಫ್ ಫುಟ್ಬಾಲ್ ಟೂರ್ನಿಯಲ್ಲಿ ನೀಡಿದ ಉತ್ತಮ ಸಾಧನೆ ಭಾರತದ ಶ್ರೇಯಾಂಕ ಪ್ರಗತಿಗೆ ಪ್ರಮುಖ ಕಾರಣ. ಸ್ಯಾಫ್ ಕೂಟದಲ್ಲಿ ಫೈನಲ್ ಪ್ರವೇಶಿಸಿರುವ ಸುನೀಲ್ ಚೆಟ್ರಿ(sunil chhetri) ಪಡೆ ಚಾಂಪಿಯನ್ ಪಟ್ಟ ಅಲಂಕರಿಸದರೆ ಮತ್ತಷ್ಟು ಶ್ರೇಯಾಂಕ ಪ್ರಗತಿ ಸಾಧಿಸುವ ಅವಕಾಶವಿದೆ.
ಸ್ಯಾಫ್ ಕಪ್‌ನಲ್ಲಿ ಭಾರತ ಅಜೇಯ ತಂಡವಾಗಿ ಫೈನಲ್ಗೆ ಲಗ್ಗೆಯಿಟ್ಟಿತು. ಆರಂಭಿಕ ಪಂದ್ಯದಲ್ಲಿ ಪಾಕ್ಗೆ 4-0 ಗೋಲ್ಗಳಿಂದ ಆಘಾತವಿಕ್ಕಿದರೆ, ಮುಂದಿನ ಪಂದ್ಯದಲ್ಲಿ ನೇಪಾಳವನ್ನು ಮಗುಚಿ ಹಾಕಿತ್ತು. ಅಂತಿಮ ಪಂದ್ಯದಲ್ಲಿ ಕುವೈತ್ ವಿರುದ್ಧ ಡ್ರಾ ಸಾಧಿಸಿತ್ತು. ಕಳೆದ ತಿಂಗಳು ನಡೆದಿದ್ದ ಇಂಟರ್‌ಕಾಂಟಿನೆಂಟಲ್ ಕಪ್ ಚಾಂಪಿಯನ್ ಟೂರ್ನಿಯಲ್ಲಿ ಚೆಟ್ರಿ ಪಟೆ ಲೆಬನಾನ್ ಎದುರು 2-0 ಗೋಲುಗಳಿಂದ ಗೆದ್ದು ಚಾಂಪಿಯನ್ ಆಗಿತ್ತು,. ಇದೇ ಆತ್ಮ ವಿಶ್ವಾಸದಲ್ಲಿ ಫೈನಲ್ ಆಡುವ ಯೋಜನೆಯಲ್ಲಿದೆ ಭಾರತ ತಂಡ.
ಇದನ್ನೂ ಓದಿ SAFF Football: ಭಾರತ-ಪಾಕ್ ಫುಟ್ಬಾಲ್ ಪಂದ್ಯದಲ್ಲಿ ಕಿತ್ತಾಡಿದ ಆಟಗಾರರು; ವಿಡಿಯೊ ವೈರಲ್
ಫಿಫಾ ಶ್ರೇಯಾಂಕದ ಅಗ್ರ 3 ಸ್ಥಾನಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಫ್ರಾನ್ಸ್(,France) ದ್ವಿತೀಯ ಬ್ರಝಿಲ್(Brazil) 3ನೇ ಸ್ಥಾನ ಕಾಯ್ದುಕೊಂಡಿವೆ. ಇಂಗ್ಲೆಂಡ್ ಒಂದು ಸ್ಥಾನ ಪ್ರಗತಿ ಸಾಧಿಸಿ 4ಕ್ಕೆ ಏರಿದೆ. ಈ ಹೀಂದೆ 4ನೇ ಸ್ಥಾನದಲ್ಲಿದ್ದ ಬೆಲ್ಜಿಯಂ 5ಕ್ಕೆ ಕುಸಿದಿದೆ.
ಶ್ರೇಯಾಂಕದಲ್ಲಿ ಪ್ರತಿ ಸಾಧಿಸಿದಕ್ಕೆ ಸಂತಸ ವ್ಯಕ್ತಪಡಿಸಿರುವ ಭಾರತ ತಂಡದ ಕೋಚ್ ಐಗರ್ ಸ್ಟಿಮಾಕ್, ಮುಂದಿನ ಕೆಲವು ಪ್ರಮುಖ ಪಂದ್ಯಗಳಲ್ಲಿಯೂ ಶ್ರೇಷ್ಠ ನಿರ್ವಹಣೆ ಕಾಯ್ದುಕೊಂಡು 100 ಒಳಗಡೆ ಶ್ರೇಯಾಂಕವನ್ನು ಉಳಿಸಿಕೊಳ್ಳಬೇಕಿದೆ. ಶ್ರೇಯಾಂಕ ಪ್ರಗತಿಯ ಸುದ್ದಿ ಕೇಳಿ ಖುಷಿಯಾಗಿದೆ” ಎಂದರು.