ಕತಾರ್ : ಮುಂದಿನ ವಿಶ್ವ ಕಪ್ ಮುಸ್ಲಿಮ್ ದೇಶ ಕತಾರ್‌ನಲ್ಲಿ ನಡೆಯಲಿರುವುದು ವಿಶ್ವಾದ್ಯಂತದ ಅಭಿಮಾನಿಗಳಿಗೆ ಬೇಸರದ ವಿಷಯ. ಯಾಕೆಂದರೆ ಆ ದೇಶದಲ್ಲಿ ಮದ್ಯ ಮಾರಾಟ ಮತ್ತು ಸೇವನೆಗೆ ಸಂಪೂರ್ಣ ನಿಷೇಧವಿದೆ. ಆದರೆ, ಫುಟ್ಬಾಲ್ ಅಭಿಮಾನಿಗಳಿಗೆ ಬಿಯರ್ ಗ್ಲಾಸ್ ಕೈಯಲ್ಲಿ ಹಿಡಿದುಕೊಂಡು ಪಂದ್ಯ ನೋಡುವುದೇ ಸಂಭ್ರಮ. ಹೀಗಾಗಿ ಹೇಗಾದರೂ ಮಾಡಿ ಮದ್ಯಕ್ಕೊಂದು ವ್ಯವಸ್ಥೆ ಮಾಡಿಕೊಡಬೇಕು ಎಂದು ನಿರಂತರವಾಗಿ ಬೇಡಿಕೆಯಿಟ್ಟಿದ್ದರು. ಅದರ ಫಲವಾಗಿ ಪಂದ್ಯ ಆರಂಭಕ್ಕೆ ಸ್ವಲ್ಪ ಹೊತ್ತು ಮೊದಲು ಹಾಗೂ ಮುಕ್ತಾಯದ ಬಳಿಕ ಸ್ವಲ್ಪ ಹೊತ್ತು ಮದ್ಯ ಖರೀದಿಗೆ ಅವಕಾಶ ನೀಡಲಾಗಿದೆ.
ಮಾಹಿತಿಯ ಪ್ರಕಾರ ಪಂದ್ಯದ ಆರಂಭಕ್ಕೆ ಮೂರು ಗಂಟೆ ಮೊದಲು ಸ್ಟೇಡಿಯಮ್‌ನ ಹತ್ತಿರದ ನಿರ್ದಿಷ್ಟ ಪ್ರದೇಶದಲ್ಲಿ ಬಿಯರ್ ಮಾರಾಟ ಆರಂಭವಾಗಲಿದೆ. ಬಿಯರ್ ಬೇಕಾದವರು ಅಲ್ಲಿಂದ ತೆಗೆದುಕೊಂಡು ಹೋಗಬೇಕಾಗುತ್ತದೆ. ಅಂತೆಯೇ ಪಂದ್ಯ ಮುಕ್ತಾಯದ ಕೊನೇ ಸೀಟಿ ಹೊಡೆದ ಬಳಿಕ ಒಂದು ಗಂಟೆ ಕಾಲ ಬಿಯರ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಪಂದ್ಯ ನಡೆಯುತ್ತಿರುವ ಹೊತ್ತಿನಲ್ಲಿ ಬಿಯರ್ ಸಿಗುವುದಿಲ್ಲ ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಆಯೋಜಕ ಸಂಸ್ಥೆಯ ಮುಖ್ಯಸ್ಥ ನಾಸರ್ ಅಲ್ ಖತರ್ ಮಾತನಾಡಿ “ನಿರ್ದಿಷ್ಟ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ. ಆದರೆ, ಟಿಕೆಟ್ ಹೊಂದಿರುವ ಅಭಿಮಾನಿಗಳು ತಮಗೆ ಹಾಗೂ ಬೇರೆಯವರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು,” ಎಂಬುದಾಗಿ ಹೇಳಿದ್ದಾರೆ.
ಮುಸ್ಲಿಮ್ ದೇಶಗಳಲ್ಲಿ ಸಲಿಂಗಕಾಮಿಗಳಿಗೆ ಅವಕಾಶವಿಲ್ಲ. ಆದರೆ ಫುಟ್ಬಾಲ್ ವಿಶ್ವ ಕಪ್ ವೇಳೆ ಅವರಿಗೂ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಸಲಿಂಗಕಾಮಿಗಳು ಸಾರ್ವಜನಿಕವಾಗಿ ಜತೆಯಾಗಿ ಓಡಾಡಬಹುದು ಎಂಬುದಾಗಿಯೂ ಹೇಳಿದೆ.
ಇದನ್ನೂ ಓದಿ | ವಿಸ್ತಾರ Explainer | FIFA ban: ಪ್ರಫುಲ್ ಪಟೇಲ್ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್