ದೋಹಾ: ಕತಾರ್ನಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್(Fifa World Cup) ಕಾಲ್ಚೆಂಡಿನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಈ ಫುಟ್ಬಾಲ್ ಹಬ್ಬ ಆರಂಭವಾಗಲಿದೆ. ಇದೀಗ ಈ ಕಾಲ್ಚೆಂಡಿನ ವಿಶ್ವ ಸಮರಕ್ಕೆ ಆತಿಥ್ಯ ವಹಿಸಿದ ವರ್ಣರಂಜಿತ 8 ಸ್ಟೇಡಿಯಂಗಳ ಪರಿಚಯ ಇಲ್ಲಿದೆ.
ಲುಸೈಲ್ ಕ್ರೀಡಾಂಗಣ
ಕತಾರ್ ಫಿಫಾ ವಿಶ್ವ ಕಪ್ನ 8 ಕ್ರೀಡಾಂಗಣದಲ್ಲಿ ಲುಸೈಲ್ ಅತಿದೊಡ್ಡದು ಎಂಬ ಹೆಗ್ಗಳಿಕೆ ಗಳಿಸಿದೆ. 80,000 ಆಸನ ಸಾಮರ್ಥ್ಯ ಹೊಂದಿದ್ದು, ಫೈನಲ್ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಈ ಸ್ಟೇಡಿಯಮ್ ಅರಬ್ ದೇಶದಲ್ಲಿ ಜಯಪ್ರೀಯವಾಗಿರುವ ಬಟ್ಟಲಿನ ಆಕಾರ ಹೊಂದಿದೆ. ಪಂದ್ಯದ ವೇಳೆ ಬಿಸಿ ಗಾಳಿಯನ್ನು ತೆಡೆಯಲು ಪಾಲಿಟ್ರೆಟಾ ಫ್ಲೋರೊಎಥಲಿನ್ ಎಂಬ ರಾಸಾಯನಿಕವನ್ನು ಬಳಸಿ ಆಟಗಾರಿಗೆ ಬಿಸಿ ತಟ್ಟದಂತೆ ಮಾಡಲಾಗಿದೆ. ಈ ಮೈದಾನದಲ್ಲಿ ಒಟ್ಟು ಹತ್ತು ಪಂದ್ಯಗಳು ನಡೆಯಲಿವೆ.
ಅಹಮದ್ ಬಿನ್ ಅಲಿ ಸ್ಟೇಡಿಯಮ್, ಅಲ್ ವಕ್ರಾ
ಕತಾರ್ನ ನೂತನ ಸ್ಟೇಡಿಯಮ್ ಇದಾಗಿದ್ದು. 2015ರಲ್ಲಿ ನಿರ್ಮಾಣವಾಗಿದ್ದ ಕ್ರೀಡಾಂಗಣ ನೆಲಸಮ ಮಾಡಿ ಹೊಸ ಕ್ರೀಡಾಂಗಣವನ್ನು ಕಟ್ಟಲಾಗಿದೆ. ಇದು ಓಪನ್ ಕ್ರೀಡಾಂಗಣವಾಗಿದ್ದು ಹವಾ ನಿಯಂತ್ರಿತ ವ್ಯವಸ್ಥೆಯನ್ನೂ ಒಳಗೊಂಡಿದೆ. ಅದರಂತೆ ಪಂದ್ಯಗಳ ವೇಳೆ 26 ಡಿಗ್ರಿ ತಾಪಮಾನ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಮರುಭೂಮಿಯ ತುತ್ತ ತುದಿಯಲ್ಲಿರುವ ಈ ಮೈದಾನದಲ್ಲಿ ಒಟ್ಟು ಏಳು ಪಂದ್ಯಗಳು ನಡೆಯಲಿದ್ದು, 44,740 ಆಸನ ಸಾಮರ್ಥ್ಯ ಹೊಂದಿದೆ.
ಅಲ್ ಜನೌಬ್ ಸ್ಟೇಡಿಯಮ್, ಅಲ್ ವಕ್ರಾ
ಸಾಂಪ್ರದಾಯಿಕ ಧೌ ದೋಣಿಗಳನ್ನು ಹೋಲುವ ಈ ಕ್ರೀಡಾಂಗಣದಲ್ಲಿ ಏಳು ಪಂದ್ಯಗಳು ನಡೆಯಲಿವೆ. ಏಕಕಾಲಕ್ಕೆ 40,000 ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಸಾಧ್ಯವಿದೆ. ಇನ್ನು ಈ ಮೈದಾನದಲ್ಲಿಯೂ ಹವಾನಿಯಂತ್ರಿತ ವ್ಯವಸ್ಥೆ ಇರಲಿದೆ. ಇಲ್ಲಿ ವಿಶ್ವ ಕಪ್ ಪಂದ್ಯ ಮುಕ್ತಾಯದ ಬಳಿಕ ಆಸನಗಳ ಸಾಮರ್ಥ್ಯವನ್ನು 20,000ಕ್ಕೆ ಇಳಿಕೆ ಮಾಡಲಾಗುವುದು ಎಂದು ಫಿಫಾ ಹೇಳಿದೆ.
ಎಜುಕೇಶನ್ ಸಿಟಿ ಕ್ರೀಡಾಂಗಣ, ಅಲ್ ರಯ್ಯನ್
ಕ್ರೀಡಾಂಗಣದ ಸುತ್ತ ಮುತ್ತ ವಿಶ್ವವಿದ್ಯಾಲಯಗಳು ಇರುವ ಕಾರಣದಿಂದ ಈ ಸ್ಟೇಡಿಯಂಗೆ ಎಜುಕೇಶನ್ ಸಿಟಿ ಸ್ಟೇಡಿಯಮ್ ಎಂದು ಹೆಸರಿಡಲಾಗಿದೆ. ತ್ರಿಕೋನಾಕೃತಿ ಈ ಕ್ರೀಡಾಂಗಣ ವಜ್ರದ ರೀತಿ ಕಾಣುತ್ತದೆ. ಜಾಗತಿಕ ಸುಸ್ಥಿರತೆಯ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಫೈವ್ಸ್ಟಾರ್ ರೇಟಿಂಗ್ ಹೊಂದಿದೆ. ಒಟ್ಟು 8 ಪಂದ್ಯಗಳು ನಡೆಯಲಿದ್ದು, 40,000 ಆಸನ ಸಾಮರ್ಥ್ಯ ಹೊಂದಿದೆ.
ಖಲಿಫಾ ಮೈದಾನ
ಕತಾರ್ನ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕ್ರೀಡಾಂಗಣ ಇದಾಗಿದ್ದು ಈ ಬಾರಿ 8 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಅದರಂತೆ ಇಲ್ಲಿ ಏಕಕಾಲಕ್ಕೆ 45,416 ಮಂದಿಗೆ ಪಂದ್ಯ ವೀಕ್ಷಿಸಬಹುದಾಗಿದೆ. 2006ರ ಏಷ್ಯನ್ ಗೇಮ್ಸ್ ಸೇರಿ ಹಲವು ಐತಿಹಾಸಿಕ ಕ್ರೀಡಾಕೂಟಗಳಿಗೆ ಈ ಸ್ಟೇಡಿಯಮ್ ಸಾಕ್ಷಿಯಾಗಿದೆ.
ಅಲ್ ಥುಮಾಮ ಮೈದಾನ, ದೋಹಾ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಈ ಕ್ರೀಡಾಂಗಣವನ್ನು ಫಿಫಾ ವಿಶ್ವ ಕಪ್ ಟೂರ್ನಿಗೋಸ್ಕರವೇ ನಿರ್ಮಾಣ ಮಾಡಲಾಗಿದೆ. ವಿಶ್ವ ಕಪ್ ಬಳಿಕ ಇಲ್ಲಿನ ಆಸನ ಸಾಮರ್ಥ್ಯವನ್ನು 40,000ರಿಂದ 20,000ಕ್ಕೆ ಇಳಿಸಿ ಹೆಚ್ಚುವರಿ ಆಸನಗಳನ್ನು ಬಡ ರಾಷ್ಟ್ರಗಳಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಖಾಲಿಯಾಗುವ ಜಾಗದಲ್ಲಿ ಐಷಾರಾಮಿ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಅರಬ್ ಪ್ರಾಂತ್ಯದಲ್ಲಿ ಬಳಸುವ ಸಾಂಪ್ರದಾಯಿಯ “ಗಹ್ಫಿಯಾ” ಟೋಪಿಯ ಆಕಾರದಲ್ಲಿರುವ ಈ ಮೈದಾನದಲ್ಲಿ ಒಟ್ಟು 8 ಪಂದ್ಯಗಳು ನಡೆಯಲಿವೆ.
ಅಲ್ ಬೇತ್ ಸ್ಟೇಡಿಯಂ, ಅಲ್ ಖೋರ್
ದೋಹಾದ ರಾಜಧಾನಿಯಿಂದ 35 ಕಿ.ಮೀ ದೂರದಲ್ಲಿರುವ ಈ ಕ್ರೀಡಾಂಗಣದಲ್ಲಿ ವಿಶ್ವ ಕಪ್ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣ ಕತಾರ್ನಲ್ಲಿ ವಾಸಿಸುವ ಅಲೆಮಾರಿ ಜನರು ಬಳಸುವ ಟೆಂಟ್ಗಳ ಆಕಾರದಲ್ಲಿದೆ. ಒಟ್ಟು 9 ಪಂದ್ಯಗಳು ಇಲ್ಲಿ ನಡೆಯಲಿದ್ದು, 60,000 ಆಸನ ಸಾಮರ್ಥ್ಯ ಹೊಂದಿದೆ.
ಸ್ಟೇಡಿಯಂ 974
ವಿಶ್ವ ಕಪ್ ಪಂದ್ಯಗಳ ಆತಿಥ್ಯಕ್ಕೆ ಕತಾರ್ ಹೊಸದಾಗಿ ಕ್ರೀಡಾಂಗಣಗಳ ನಿರ್ಮಾಣಕ್ಕೆ ಮುಂದಾದಾಗ
ಸಾಮಗ್ರಿಗಳನ್ನು ಹೊತ್ತು ತಂಡ ಹಡಗುಗಳ ಕಂಟೈನರ್ಗಳನ್ನೇ ಬಳಸಿ ಸ್ಟೇಡಿಯಮ್ ಒಂದನ್ನು ಕಟ್ಟುವ ಯೋಜನೆಯನ್ನು ಆಯೋಜನಾ ಸಮಿತಿ ರೂಪಿಸಿತ್ತು. ಅದರಂತೆ 974 ಕಂಟೈನರ್ಗಳಿಂದ ನಿರ್ಮಾಣವಾದ ಇದಕ್ಕೆ ಸ್ಟೇಡಿಯಂ 947 ಎಂದು ಹೆಸರಿಡಲಾಗಿದೆ. ಇನ್ನೊಂದು ವಿಶೇಷವೆಂದರೆ 947 ಎನ್ನುವ ಸಂಖ್ಯೆ ಕತಾರ್ ದೇಶದ ಅಂತಾರಾಷ್ಟ್ರೀಯ ಡಯಲಿಂಗ್ ಕೋಡ್ ಕೂಡ ಆಗಿದೆ. ಇಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿದ್ದು, 40,000 ಆಸನ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ | Fifa World Cup 2022 | ಗೋಲ್ಡನ್ ಬೂಟ್ ಪ್ರಶಸ್ತಿ ವಿಜೇತ ಟಾಪ್ 5 ಆಟಗಾರರು