ದೋಹಾ: ಫಿಫಾ ಫುಟ್ಬಾಲ್ ವಿಶ್ವ ಕಪ್ ಹಬ್ಬಕ್ಕೆ (FIFA World Cup 2022) ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 20 ರಿಂದ ಕತಾರ್‌ನಲ್ಲಿ ಪ್ರಾರಂಭವಾಗುವ ಕಾಲ್ಚೆಂಡಿನ ಜಾತ್ರೆಯಲ್ಲಿ ಭಾಗವಹಿಸಲು ಬಹುತೇಕ ಎಲ್ಲ ತಂಡಗಳು ಕತಾರ್ ತಲುಪಿವೆ. ಇದೇ ವೇಳೆ ಪೋಲೆಂಡ್ ತಂಡ ವಿಶೇಷ ಭದ್ರತೆಯೊಂದಿಗೆ ಕತಾರ್ ತಲುಪಿದ್ದು ಇದೀಗ ವಿಶ್ವಾದಂತ್ಯ ಚರ್ಚೆಗೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಪೋಲೆಂಡ್ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಹೀಗಾಗಿ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಎಫ್16 ಯುದ್ಧ ವಿಮಾನದ ಬಿಗಿ ಭದ್ರತೆಯಲ್ಲಿ ವಿಶ್ವಕಪ್‌ಗಾಗಿ ಕತಾರ್‌ಗೆ ಕರೆದೊಯ್ಯಲಾಗಿದೆ. ಪೋಲೆಂಡ್ ತಂಡವು ಈ ಭದ್ರತೆಯ ವೀಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ರಕ್ಷಣೆ ನೀಡಿದಕ್ಕಾಗಿ ಧನ್ಯವಾದ ತಿಳಿಸಿದೆ.
ಏಕೆ ಈ ರಕ್ಷಣೆ
ಪೋಲೆಂಡ್‌ನ ಹಳ್ಳಿಯ ಮೇಲೆ ಕೆಲ ದಿನಗಳ ಹಿಂದೆ ಕ್ಷಿಪಣಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಪೋಲೆಂಡ್ ನ್ಯಾಟೋ ಸದಸ್ಯ ರಾಷ್ಟ್ರವಾಗಿರುವುದರಿಂದ ರಷ್ಯಾ, ಪೋಲೆಂಡ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪ ಹೊರಿಸಿತ್ತು. ಈ ಸ್ಫೋಟ ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟುಹಾಕಿತ್ತು. ಆದರೆ ಕೆಲ ಹೊತ್ತಿನ ನಂತರ ಈ ಸ್ಫೋಟಕ್ಕೆ ರಷ್ಯಾದಿಂದ ಹಾರಿಬಂದ ಕ್ಷಿಪಣಿ ಕಾರಣವಲ್ಲ ಎಂದು ದೃಢಪಟ್ಟ ಬಳಿಕ ಹಲವು ದೇಶಗಳು ನಿಟ್ಟುಸಿರು ಬಿಟ್ಟಿದ್ದವು. ರಷ್ಯಾದಿಂದ ಬರುತ್ತಿದ್ದ ಕ್ಷಿಪಣಿಯನ್ನು ತಡೆಗಟ್ಟಲು ಉಕ್ರೇನ್ ಹಾರಿಬಿಟ್ಟ ಬರಾಜ್ (ಕ್ಷಿಪಣಿಗಳನ್ನು ಆಗಸದಲ್ಲಿಯೇ ತಡೆಯುವ ಯುದ್ಧೋಪಕರಣ) ಪೊಲೆಂಡ್ ಗಡಿಯೊಳಗೆ ಬಂದಿರಬಹುದು ಎಂದು ಪ್ರಾಥಮಿಕ ತನೆಖೆಯ ಬಳಿಕ ಮಾಹಿತಿ ಹೊರಬಿದ್ದಿತ್ತು. ಆದರೂ ಮುಂಜಾಗ್ರತ ಕ್ರಮವಾಗಿ ಪೋಲೆಂಡ್ ಸರ್ಕಾರ ಆಟಗಾರರನ್ನು ಎಫ್16 ಯುದ್ಧ ವಿಮಾನದ ಬಿಗಿ ಭದ್ರತೆಯಲ್ಲಿ ಕತಾರ್‌ಗೆ ಕಳುಹಿಸಿದೆ.
ಇದನ್ನೂ ಓದಿ | Fifa World Cup | ಕತಾರ್ ವಿಶ್ವಕಪ್ ಮೈದಾನದ ಬಳಿ ಬಿಯರ್ ಮಾರಾಟ ನಿಷೇಧ