ದೋಹಾ: ಅರಬ್ ರಾಷ್ಟ್ರ ಕತಾರ್‌ನಲ್ಲಿ ವರ್ಣರಂಜಿತವಾಗಿ ಭಾನುವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ ಫಿಫಾ ವಿಶ್ವ ಕಪ್ ಫುಟ್ಬಾಲ್(Fifa World Cup) ಹಬ್ಬಕ್ಕೆ ಸಂಬಂಧಿಸಿದಂತೆ ವಿವಾದಗಳೇ ಹೆಚ್ಚು ಸುದ್ದಿಯಾಗುತ್ತಿರುವುದು ವಿಪರ್ಯಾಸ. ಈ ಸಾಲಿಗೆ ನೂತನ ಸೇರ್ಪಡೆಯೆಂದರೆ, ದುಬಾರಿ ಟಿಕೆಟ್ ದರ. ಮುಖ್ಯವಾಗಿ ಇದು ವಿದೇಶಗಳಿಂದ ಆಗಮಿಸಿದ ಫುಟ್ಬಾಲ್ ಪ್ರೇಮಿಗಳಿಗೆ ಅಸಮಾಧಾನಕ್ಕೆ ಕಾರಣವಾಗಿದೆ.
ವಿಮಾನದ ಟಿಕೆಟ್ ದರಕ್ಕಿಂತ ಫುಟ್ಬಾಲ್ ಪಂದ್ಯದ ಟಿಕೆಟ್ ಬೆಲೆ ಜಾಸ್ತಿ!
ರಷ್ಯಾದಲ್ಲಿ 4 ವರ್ಷಗಳ ಹಿಂದೆ ನಡೆದ ವಿಶ್ವ ಕಪ್ ಫುಟ್ಬಾಲ್ ಟೂರ್ನಿಯ ವೇಳೆಯಿದ್ದ ಟಿಕೆಟ್ ದರಕ್ಕಿಂತ ಶೇ. 40ರಷ್ಟು ಏರಿಕೆಯಾಗಿದೆ. ರಷ್ಯಾದಲ್ಲಿ ಪ್ರೇಕ್ಷಕರೊಬ್ಬರ ಪ್ರವೇಶಕ್ಕೆ ಸರಾಸರಿ 214 ಪೌಂಡ್‌ಗಳಾಗಿದ್ದರೆ (20 ಸಾವಿರ ರೂ.) ಕತಾರ್‌ನಲ್ಲಿ ಇದು 286 ಪೌಂಡ್‌ಗಳಿಗೆ ಏರಿದೆ (28 ಸಾವಿರ ರೂ.). 2018ರ ವಿಶ್ವ ಕಪ್ ಫೈನಲ್ ಪಂದ್ಯದ ಟಿಕೆಟ್ ದರದೊಂದಿಗೆ ಹೋಲಿಸಿದರೆ ಈ ಸಲದ ದರದಲ್ಲಿ ಶೇ. 59ರಷ್ಟು ಏರಿಕೆ ಆಗಿದೆ! ಫೈನಲ್ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ ಬೆಲೆ 686 ಪೌಂಡ್ (66,689 ರೂ.) ಆಗಿದೆ.
2006ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಯ ವೇಳೆಯೂ ದುಬಾರಿ ಟಿಕೆಟ್ ದರದ ಕುರಿತು ಕೂಗು ಕೇಳಿಬಂದಿತ್ತು. ಹಿಂದಿನ 20 ವರ್ಷಗಳಲ್ಲೇ ಇದು ಅತ್ಯಂತ ದುಬಾರಿ ಎನ್ನಲಾಗಿತ್ತು. ಬರ್ಲಿನ್‌ನಲ್ಲಿ ನಡೆದ ಫೈನಲ್ ಪಂದ್ಯದ ಸರಾಸರಿ ಟಿಕೆಟ್ ದರ 221 ಪೌಂಡ್ ಆಗಿತ್ತು. ಇದೀಗ ಕತಾರ್ ವಿಶ್ವ ಕಪ್ ಕೂಟಕ್ಕೂ ಇಂಥದೇ ಕೂಗೂ ಕೇಳಿ ಬಂದಿದೆ. ಆದರೆ ಈ ಪಂದ್ಯಾವಳಿಯನ್ನು ಸ್ಮರಣೀಯಗೊಳಿಸಲು ವ್ಯಯಿಸಿದ ಭಾರಿ ಮೊತ್ತವನ್ನು ಟಿಕೆಟ್ ದರದಲ್ಲಿ ಸರಿದೂಗಿಸುವುದು ಕತಾರ್‌ನ ಯೋಜನೆಯಾಗಿದೆ.
ಇದನ್ನೂ ಓದಿ | Fifa World Cup 2022 | ಕತಾರ್ ಫುಟ್ಬಾಲ್ ವಿಶ್ವ ಕಪ್ನಲ್ಲಿ ವಸ್ತ್ರಸಂಹಿತೆಯ ಊಹಾಪೋಹ!