ವೆಲೆನ್ಸಿಯಾ (ಸ್ಪೇನ್): ಮೊದಲ ಆವೃತ್ತಿಯ ಮಹಿಳೆಯರ ಎಫ್‌ಐಎಚ್ ಹಾಕಿ ನೇಷನ್ಸ್(FIH Nations Cup) ಕಪ್ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ 2023-24ರ ಎಫ್‌ಐಎಚ್ ಮಹಿಳಾ ಪ್ರೊ ಲೀಗ್‌ಗೆ ನೇರ ಪ್ರವೇಶ ಪಡೆದುಕೊಂಡಿದೆ.
ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 1-0 ಗೋಲ್ ಅಂತರದಿಂದ ಆತಿಥೇಯ ಸ್ಪೇನ್ ತಂಡವನ್ನು ಸೋಲಿಸುವ ಮೂಲಕ ಅಧಿಕಾರಯುತ ಗೆಲುವು ಸಾಧಿಸಿತು. ಪಂದ್ಯದ ಆರಂಭದ 5ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗುರ್ಜಿತ್ ಕೌರ್ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕದ ಮೂರು ಕ್ವಾರ್ಟರ್ನಲ್ಲಿ ಭಾರತ ಗೋಲು ಸಾಧಿಸಲು ಸಾಧ್ಯವಾಗದಿದ್ದರೂ ಪಂದ್ಯದ ಅಂತಿಮ ಕ್ಷಣದವರೆಗೂ ರಕ್ಷಣಾತ್ಮಕ ಆಡವಾಡುವ ಮೂಲಕ ಮೇಲುಗೈ ಸಾಧಿಸಿತು.
ಸೆಮಿಫೈನಲ್‌ನಲ್ಲಿ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲ್ ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿ ಫೈನಲ್ಗೆ ಪ್ರವೇಶಿಸಿತ್ತು. ಅದರಂತೆ ಫೈನಲ್ನಲ್ಲಿಯೂ ಗೆಲುವು ಸಾಧಿಸುವ ಮೂಲಕ ಈ ಟೂರ್ನಿಯಲ್ಲಿ ಭಾರತ ಸತತ ಐದು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿತು.
ಚೊಚ್ಚಲ ಆವೃತ್ತಿಯಲ್ಲಿಯೇ ಅಮೋಘ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡದ ಆಟಗಾರ್ತಿಯರಿಗೆ, ಹಾಕಿ ಇಂಡಿಯಾ ತಲಾ 2 ಲಕ್ಷ ಮತ್ತು ನೆರವು ಸಿಬ್ಬಂದಿಗೆ 1 ಲಕ್ಷ ಬಹುಮಾನ ಪ್ರಕಟಿಸಿದೆ.
ಇದನ್ನೂ ಓದಿ | Fifa World Cup | ಮೆಸ್ಸಿಯ ಕೊನೆಯ ವಿಶ್ವ ಕಪ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ ಫುಟ್ಬಾಲ್ ಜಗತ್ತು!