ರೂರ್ಕೆಲಾ: ಇಲ್ಲಿ ನಡೆಯುತ್ತಿರುವ ಎಫ್ಐಎಚ್ ಪ್ರೊ ಲೀಗ್(FIH Pro League) ಹಾಕಿ ಕೂಟದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಹರ್ಮನ್ಪ್ರೀತ್ ಸಿಂಗ್ ಪಡೆ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 6-3 ಗೋಲುಗಳ ಅಂತರದಿಂದ ಗೆದ್ದು ಬೀಗಿದೆ.
ಭಾರತವು ಈ ಗೆಲುವಿನೊಂದಿಗೆ ಕಳೆದ ಮೂರು ದಿನಗಳಲ್ಲಿ ಜರ್ಮನಿ ವಿರುದ್ಧ ದಾಖಲಿಸಿದ ಎರಡನೇ ಗೆಲುವು ಇದಾಗಿದೆ. ಟೂರ್ನಿಯಲ್ಲಿ ಭಾರತವು ಆಡಿದ ಏಳು ಪಂದ್ಯಗಳಿಂದ 17 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸ್ಪೇನ್ ತಂಡ 17 ಅಂಕ ಗಳಿಸಿದ್ದರೂ ಗೋಲು ಅಂತರದಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ Hockey India: ಪುರುಷರ ಹಾಕಿ ತಂಡಕ್ಕೆ ಕ್ರೇಗ್ ಫುಲ್ಟನ್ ನೂತನ ಕೋಚ್
ಭಾರತ ಪರ ಕಾರ್ತಿ ಸೆಲ್ವಂ ಹಾಗೂ ಅಭಿಷೇಕ್ ಅವರು ತಲಾ ಎರಡು ಗೋಲುಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಜುಗ್ರಾಜ್ ಸಿಂಗ್ ಮತ್ತು ನಾಯಕ ಹರ್ಮನ್ಪ್ರೀತ್ ಸಿಂಗ್ ಒಂದು ಗೋಲ್ ಹೊಡೆದರು. ಪಂದ್ಯ ಮೂರನೇ ನಿಮಿಷದಲ್ಲಿ ಎದರಾಳಿಗೆ ಗೋಲು ಹೊಡೆಯುವ ಅವಕಾಶ ಕಲ್ಪಿಸಿದ್ದರೂ ಆ ಬಳಿಕ ಭಾರತ ಆಕ್ರಮಣಕಾರಿಯಾಗಿ ಆಡಿ ಮೇಲುಗೈ ಸಾಧಿಸಿತು.