Site icon Vistara News

ಸಚಿನ್ ಡೀಪ್‌ಫೇಕ್‌ ವಿಡಿಯೊ: ಎಫ್‌ಐಆರ್‌ ದಾಖಲಿಸಿದ ಮುಂಬೈ ಪೊಲೀಸರು

Sachin Tendulkar

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅವರ ನಕಲಿ ಡೀಪ್‌ಫೇಕ್‌(Sachin Tendulkar deepfake video) ವಿಡಿಯೊ ಮೂಲಕ ಸುಲಭವಾಗಿ ಹಣ ಗಳಿಸಲು ಗೇಮಿಂಗ್ ಆ್ಯಪ್​ ಬಳಸುವಂತೆ ಪ್ರಚಾರ ಮಾಡುತ್ತಿದ್ದ ಸಾಮಾಜಿಕ ಜಾಲತಾಣ ಮತ್ತು ಫೇಸ್‌ಬುಕ್ ಖಾತೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂಬೈಯ ಪಶ್ಚಿಮ ವಲಯದ ಸೈಬರ್ ಪೊಲೀಸ್ ಠಾಣೆಯಲ್ಲಿ ಸಚಿನ್ ಅವರ ಆಪ್ತ ಸಹಾಯಕ ಸಲ್ಲಿಸಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 500 (ಮಾನಹಾನಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 (ಎ) (ಸಂವಹನ ಸೇವೆಯ ಮೂಲಕ ಆಕ್ರಮಣಕಾರಿ ಸಂದೇಶ ಕಳುಹಿಸುವುದು) ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಬೆಟ್ಟಿಂಗ್​ ಗೇಮಿಂಗ್ ಆ್ಯಪ್​ಗಲ್ಲಿ ಯುವ ಜನರನ್ನು ಉತ್ತೇಜಿಸುವಂತೆ ಸಚಿನ್ ತೆಂಡೂಲ್ಕರ್‌ ಪ್ರಚಾರ ಮಾಡುತ್ತಿರುವ ವಿಡಿಯೊವೊಂದು ಕಲ ದಿನಗಳ ಹಿಂದೆ ಭಾರಿ ವೈರಲ್​ ಆಗಿತ್ತು. ಈ ಕುರಿತು ಸಚಿನ್​ ಕೂಡ ಕಳವಳ ವ್ಯಕ್ತಪಡಿಸಿದ್ದರು. ತಾನು ಯಾವುದೇ ಈ ರೀತಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟನ ನೀಡಿದ್ದರು. ಅಲ್ಲದೆ ಇದು ಡೀಪ್‌ಫೇಕ್‌ ಮಾಡಿದ ನಕಲಿ ವಿಡಿಯೊ ಎಂದು ಹೇಳಿದ್ದರು.

“ಈ ವಿಡಿಯೋಗಳು ನಕಲಿ. ತಂತ್ರಜ್ಞಾನದ ದುರ್ಬಳಕೆಯಾಗುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಈ ರೀತಿಯ ವೀಡಿಯೊಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಬರುವಂತ ಸುದ್ದಿಗಳನ್ನು ಯಾರು ನಂಬಲು ಹೋಗಬೇಡಿ. ಇಂತಹ ಆ್ಯಪ್​ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದು ಭವಿಷ್ಯದಲ್ಲಿ ಅತ್ಯಂತ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಸಚಿನ್​ ತಮ್ಮ ಎಕ್ಸ್​ ಖಾತೆಯಲ್ಲಿ ವಿನಂತಿಸಿದ್ದರು.

ಇದನ್ನೂ ಓದಿ Deepfake Video: ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ಪ್ರಕರಣ; ನಾಲ್ವರು ಶಂಕಿತರ ವಿಚಾರಣೆ

ತ್ವರಿತ ಕ್ರಮ ಅಗತ್ಯ


ತಂತ್ರಜ್ಞಾನದ ದುರ್ಬಳಕೆ ಆಗುತ್ತಿರು ವುದನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ದೂರುಗಳು ಹಾಗೂ ಎಚ್ಚರಿಕೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಡೀಪ್‌ಫೇಕ್‌ ಹಾಗೂ ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಯಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದರು.

ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ಅರ್ಹತೆ ಬಗ್ಗೆ ತೆಂಡುಲ್ಕರ್‌ ಮಾತನಾಡುವುದನ್ನು ವೀಡಿಯೋ ತೋರಿಸುತ್ತದೆ. ಇದರಿಂದ ತುಂಬಾ ಸುಲಭವಾಗಿ ಹಣ ಸಂಪಾದಿಸಬಹುದು. ನನ್ನ ಮಗಳೂ ಇದನ್ನು ಬಳಸುತ್ತಿದ್ದಾಳೆ ಎಂದು ನನಗೆ ತಿಳಿದಿರಲಿಲ್ಲ ಎಂದು ಸಚಿನ್‌ ಹೇಳುವಂತೆ ನಕಲಿ ವೀಡಿಯೋ ಸೃಷ್ಟಿಸಲಾಗಿತ್ತು. ಸಚಿನ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಮಾಹಿತಿ ಹಾಗೂ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಕಠಿನ ನಿಯಮ ರೂಪಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದ್ದರು.

Exit mobile version