Site icon Vistara News

ಸತ್ಯಾಗ್ರಹ ಮುಂದುವರಿಸಲು ಮತ್ತೆ ಬಂದ ಕುಸ್ತಿಪಟುಗಳು; ಎಫ್​ಐಆರ್​ ದಾಖಲಿಸಿದ ದೆಹಲಿ ಪೊಲೀಸ್​

protesting wrestlers Reacts to Media

#image_title

ದೆಹಲಿ ಜಂತರ್​ ಮಂತರ್​​ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ (Wrestlers Protest) ನಡೆಸುತ್ತಿದ್ದ ಸ್ಥಳದಲ್ಲಿ ನಿನ್ನೆ ಹೈಡ್ರಾಮಾ ನಡೆದು, ಪೊಲೀಸರು ಪ್ರತಿಭಟನಾಕಾರರ ಟೆಂಟ್​ಗಳನ್ನೆಲ್ಲ ತೆರವುಗೊಳಿಸಿದ್ದಾರೆ. ಅವರನ್ನೆಲ್ಲ ವಶಕ್ಕೆ ಪಡೆದು, ವಾಪಸ್ ಬಿಟ್ಟು ಕಳಿಸಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಪ್ರತಿಭಟನೆ ಆಯೋಜಿಸಿದ ವಿನೇಶ್ ಫೋಗಟ್​, ಸಾಕ್ಷಿ ಮಲ್ಲಿಕ್​, ಬಜರಂಗ್ ಪೂನಿಯಾ ಸೇರಿ ಇನ್ನೂ ಹಲವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ‘ಭಾನುವಾರ ಬೆಳಗ್ಗೆಯೇ ಎಲ್ಲ ಕುಸ್ತಿಪಟುಗಳನ್ನೂ ಇಲ್ಲಿಂದ ಕಳಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು. ಅವರು ಧರಣಿಗಾಗಿ ಇಲ್ಲಿ ಮಾಡಿಕೊಂಡಿದ್ದ ವ್ಯವಸ್ಥೆಗಳು ಅಂದರೆ ಅವರು ಇಟ್ಟುಕೊಂಡಿದ್ದ ಮಂಚಗಳು, ಕೂಲರ್​ಗಳು, ಫ್ಯಾನ್​ ಸೇರಿ ಎಲ್ಲ ವಸ್ತುಗಳನ್ನು, ಟೆಂಟ್​​ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಅಷ್ಟಾದರೂ ರಾತ್ರಿ ಮತ್ತೆ ಕೆಲವು ಕುಸ್ತಿಪಟುಗಳು ಇಲ್ಲಿಗೆ ಪ್ರತಿಭಟನೆ ನಡೆಸುವುದಕ್ಕೋಸ್ಕರ ಬಂದಿದ್ದರು. ಆದರೆ ಯಾರಿಗೂ ಅನುಮತಿ ಕೊಟ್ಟಿಲ್ಲ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್​ ಸಿಂಗ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರೆಸಿರುವ ಕುಸ್ತಿಪಟುಗಳು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಿಂಗಳುಗಳಿಂದಲೂ ದೆಹಲಿಯ ಜಂತರ್​ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮೇ 28ರಂದು ನೂತನ ಸಂಸತ್​ ಭವನ ಉದ್ಘಾಟನೆ ಆಗುತ್ತಿದ್ದಂತೆ ಈ ಕುಸ್ತಿಪಟುಗಳು, ಇವರಿಗೆ ಬೆಂಬಲ ನೀಡುತ್ತಿರುವ ರೈತರು, ಮತ್ತಿತರರು ಸಂಸತ್ ಭವನದತ್ತ ಮೆರವಣಿಗೆ ಹೊರಟಿದ್ದರು. ಅಲ್ಲಿ ಅವರು ಮಹಿಳಾ ಸಮ್ಮಾನ್ ಮಹಾಪಂಚಾಯತ್​ ಹಮ್ಮಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಆದರೆ ದೆಹಲಿ ಪೊಲೀಸರು ಅದನ್ನು ಸಾಧ್ಯವಾಗಲು ಬಿಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಕುಸ್ತಿಪಟುಗಳ ಮಧ್ಯೆ ತಳ್ಳಾಟ-ನೂಕಾಟ ನಡೆದಿದೆ. ಪೊಲೀಸರು ತಮ್ಮ ಮೇಲೆ ಕೈ ಮಾಡಿದ್ದಾರೆ, ಬಲವಂತವಾಗಿ ತಳ್ಳಿದ್ದಾರೆ, ಎಳೆದಾಡಿದ್ದಾರೆ, ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಕುಸ್ತಿಪಟು ಸಾಕ್ಷಿ ಮಲ್ಲಿಕ್ ಆರೋಪಿಸಿ, ವಿಡಿಯೊವನ್ನೂ ಹಂಚಿಕೊಂಡಿದ್ದರು. ಹಾಗೇ, ಪೋಗಟ್ ಸೋದರಿಯರಾದ ಸಂಗೀತಾ ಫೋಗಟ್​ ಮತ್ತು ವಿನೇಶ್​ ಫೋಗಟ್​ ಒಬ್ಬರ ಮೇಲೊಬ್ಬರು ಬಿದ್ದು, ಕೈಯಲ್ಲಿದ್ದ ರಾಷ್ಟ್ರಧ್ವಜ ನೆಲಕ್ಕೆ ಬಿದ್ದ ಫೋಟೋ ಕೂಡ ವೈರಲ್ ಆಗಿತ್ತು.

ಇದನ್ನೂ ಓದಿ: ಕುಸ್ತಿಪಟುಗಳ ಟೆಂಟ್​ ತೆಗೆದ ಪೊಲೀಸ್​; ಒಬ್ಬರ ಮೇಲೊಬ್ಬರು ಬಿದ್ದ ಫೋಗಟ್​ ಸೋದರಿಯರು, ರಾಷ್ಟ್ರಧ್ವಜಕ್ಕೆ ಅಪಮಾನ

ಇದೀಗ ತಮ್ಮ ವಿರುದ್ಧ ದಾಖಲಾದ ಎಫ್​ಐಆರ್​ಗೆ ಟ್ವೀಟ್​ನಲ್ಲಿ ಪ್ರತಿಕ್ರಿಯೆ ನೀಡಿದ ವಿನೇಶ್ ಫೋಗಟ್​ ‘ನಾವು ಬ್ರಿಜ್​ ಭೂಷಣ್​ ಸಿಂಗ್ ವಿರುದ್ಧ ಎಷ್ಟೇ ಆರೋಪ ಮಾಡಿದರೂ ಪೊಲೀಸರಿಗೆ ಆತನ ವಿರುದ್ಧ ಎಫ್​ಐಆರ್​ ದಾಖಲು ಮಾಡಲು ಏಳು ದಿನ ಬೇಕಾಯಿತು. ಆದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ ನಮ್ಮ ಮೇಲೆ ಏಳು ತಾಸಿನ ಒಳಗೆ ಎಫ್​ಐಆರ್​ ಬಿತ್ತು. ಈ ದೇಶ ಸರ್ವಾಧಿಕಾರತ್ವದ ಕಡೆಗೆ ಜಾರಿದೆಯಾ? ಕ್ರೀಡಾಪಟುಗಳನ್ನು ಇಲ್ಲಿನ ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎಂದು ಇಡೀ ವಿಶ್ವ ನೋಡುತ್ತಿದೆ. ಒಂದು ಹೊಸ ಇತಿಹಾಸ ಬರೆಯಲ್ಪಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

Exit mobile version