Site icon Vistara News

First Drug Testing Olympics: ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದದ್ದು ಯಾವಾಗ?

First Drug Testing Olympics

First Drug Testing Olympics: First drug testing and disqualification of athletes at the Olympics

ಬೆಂಗಳೂರು​: ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗಲೇ ಜಪಾನ್‌ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ತಂಡದ ನಾಯಕಿಯಾಗಿದ್ದ 19 ವರ್ಷದ ಶೊಕೊ ಮಿಯಾಟಾ ತರಬೇತಿ ಶಿಬಿರಲ್ಲಿ ಮಧ್ಯಪಾನ ಹಾಗೂ ಧೂಪಮಾನ ಮಾಡಿರುವ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ಅವರು ಈ ಬಾರಿಯ ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ. ಒಲಿಂಪಿಕ್ಸ್‌ಗಳಲ್ಲಿಯೂ ಉದ್ದೀಪನ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಯುತ್ತದೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ(First Drug Testing Olympics) ಪ್ರಕರಣ ಬೆಳಕಿಗೆ ಬಂದದ್ದು ಯಾವಾಗ? ಎನ್ನುವ ಮಾಹಿತಿ ಇಂತಿದೆ.

ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದದ್ದು 1968ರ ಮೆಕ್ಸಿಕೊ ಗೇಮ್ಸ್‌ನಲ್ಲಿ. ಬಿಯರ್‌ ಕುಡಿದಿದ್ದಕ್ಕಾಗಿ ಸ್ವೀಡನ್‌ ಆ್ಯತ್ಲೀಟ್‌ ಹನ್ಸ್‌-ಗುನ್ನಾರ್‌ ಲಿಲಿಜೆನ್‌ವಾಲ್‌ ನಿಷೇಧ ಶಿಕ್ಷೆ ಅನುಭವಿಸಬೇಕಾಯಿತು! ಇದಕ್ಕಾಗಿ ಅವರು ಗೆದ್ದಿದ್ದ ಕಂಚಿನ ಪದಕವನ್ನೂ ವಾಪಸ್‌ ಪಡೆಯಲಾಗಿತ್ತು. ಲಿಲಿಜೆನ್‌ವಾಲ್‌ ಅವರಿಗೆ ಈಗ 83 ವರ್ಷ ವಯಸ್ಸು. ಜೀವಿತಾವಧಿಯಲ್ಲೇ ಇದ್ದಾರೆ.


ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಉದ್ದೀಪನ ಮದ್ದುಗಳನ್ನು ತೆಗೆದುಕೊಳ್ಳುವುದೂ ವ್ಯಾಪಕವಾಗಿದೆ. ಕ್ರೀಡಾ ಮನೋಭಾವಕ್ಕೆ ವಿರುದ್ಧವಾದ ಉದ್ದೀಪನ ಮದ್ದು ಸೇವನೆಯನ್ನು ಜಗತ್ತಿನಾದ್ಯಂತ ಟೀಕಿಸಲಾಗುತ್ತಿದೆ. ಆದ್ದರಿಂದ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ಸಂಸ್ಥೆಗಳು ಮದ್ದು ತೆಗೆದುಕೊಳ್ಳುವುದನ್ನೂ ವ್ಯವಸ್ಥಿತ ರೀತಿಯಲ್ಲಿ ನಿಯಂತ್ರಿಸುತ್ತಿವೆ.

ಸ್ಟಿರಾಯಿಡ್‌ಗಳು ಹಾಗೂ ಸಾಮರ್ಥ್ಯವರ್ಧಕಗಳನ್ನು ಸೇವಿಸಿದವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬೀಳುವುದು ಹೆಚ್ಚು. ಪ್ರತಿವರ್ಷ ‘ವಿಶ್ವ ಉದ್ದೀಪನ ಮದ್ದು ನಿಷೇಧ ಸಂಸ್ಥೆ’ಯು ನಿಷೇಧಿತ ಮದ್ದುಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಕೆಲವು ಔಷಧಗಳನ್ನು ನಿರ್ದಿಷ್ಟ ಕ್ರಮದಲ್ಲಿ ತೆಗೆದುಕೊಳ್ಳುವುದು ಸರಿಯಲ್ಲ ಎನ್ನುವುದನ್ನು ಕೂಡ ತಿಳಿಸುತ್ತದೆ.

ಇದನ್ನೂ ಓದಿ Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

ಒಲಿಂಪಿಕ್‌ ನಡೆಯುವ ಮುನ್ನವೇ ಕ್ರೀಡಾಪಟುಗಳು ತಮ್ಮ ರಕ್ತ ಹಾಗೂ ಮೂತ್ರವನ್ನು ಪರೀಕ್ಷೆಗೆ ನೀಡಬೇಕಾಗುತ್ತದೆ. ಇದಾದ ಬಳಿಕ ಕೂಟದಲ್ಲಿ ನಿರ್ದಿಷ್ಟ ಆಟ ಅಥವಾ ಸ್ಪರ್ಧೆಯಲ್ಲಿ ಮೊದಲ ಐದು ಸ್ಥಾನ ಪಡೆದವರ ರಕ್ತ ಹಾಗೂ ಮೂತ್ರವನ್ನು ತಕ್ಷಣವೇ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತದೆ. ಸ್ಪರ್ಧೆ ನಡೆಯುವ ಸ್ಥಳಗಳಲ್ಲೇ ಪದೇ ಪದೇ ಇಂಥ ಪರೀಕ್ಷೆಗಳನ್ನು ನಡೆಸಬಹುದಾಗಿದೆ.

ಪ್ರತಿ ಅಥ್ಲೀಟ್‌ನಿಂದ ಎರಡು ‘ಸ್ಯಾಂಪಲ್‌’ಗಳನ್ನು ತೆಗೆದುಕೊಳ್ಳುತ್ತಾರೆ. ಮೊದಲ ‘ಸ್ಯಾಂಪಲ್‌’ನಲ್ಲಿ ನಿಷೇಧಿತ ಮದ್ದು ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟರೆ, ಅಥ್ಲೀಟ್‌ಗಳು ಎರಡನೇ ಸ್ಯಾಂಪಲ್‌ ಅನ್ನೂ ಪರೀಕ್ಷಿಸುವಂತೆ ಮನವಿ ಮಾಡಿಕೊಳ್ಳಬಹುದು. ರಕ್ತ ಅಥವಾ ಮೂತ್ರದ ‘ಸ್ಯಾಂಪಲ್‌’ಗಳನ್ನು (ನಮೂನೆಗಳನ್ನು) ಶೈತ್ಯಾಗಾರದಲ್ಲಿ ಸಂಗ್ರಹಿಸಿಟ್ಟು, ಎಂಟು ಹತ್ತು ವರ್ಷಗಳ ನಂತರ ಕೂಡ ಪರೀಕ್ಷಿಸಬಹುದಾಗಿದೆ.

Exit mobile version