ನಾಗ್ಪುರ: ಭಾರತ(IND VS AUS) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡ ಮೊದಲನೇ ದಿನದ ಭೋಜನ ವಿರಾಮದ ವೇಳೆಗೆ 32 ಓವರ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದೆ.
ಮಾರ್ನಸ್ ಲಬುಶೇನ್(47*) ಹಾಗೂ ಸ್ಟೀವನ್ ಸ್ಮಿತ್(19*) ಕ್ರೀಸ್ನಲ್ಲಿದ್ದು ತಂಡಕ್ಕೆ ಆಸರೆಯಾಗಿದ್ದಾರೆ. ಮೊಹಮ್ಮದ್ ಶಮಿ(Mohammed Shami) ಹಾಗೂ ಮೊಹಮ್ಮದ್ ಸಿರಾಜ್ ಅವರು ಆರಂಭದಲ್ಲೇ ಆಸೀಸ್ಗೆ ದೊಡ್ಡ ಹೊಡೆತ ನೀಡಿದರು. ತಂಡದ ಮೊತ್ತ ಎರಡು ರನ್ ಆಗುವಷ್ಟರಲ್ಲಿ ಸ್ಫೋಟಕ ಬ್ಯಾಟರ್ಗಳಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜ ವಿಕೆಟ್ ಕಿತ್ತು ಮಿಂಚಿದರು. ಆದರೆ ಮೂರನೇ ವಿಕೆಟ್‌ಗೆ ಜತೆಯಾದ ಮಾರ್ನಸ್ ಲಬುಶೇನ್(Marnus Labuschagne) ಹಾಗೂ ಸ್ಟೀವನ್ ಸ್ಮಿತ್(Steven Smith) 74 ರನ್ ಜತೆಯಾಟವಾಡುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾಗಿದ್ದಾರೆ.
ಸದ್ಯ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಮಾರ್ನಸ್ ಲಬುಶೇನ್ 110 ಎಸೆತಗಳಲ್ಲಿ ಅಜೇಯ 47 ರನ್ ಹಾಗೂ ಸ್ಟೀವನ್ ಸ್ಮಿತ್ ಅಜೇಯ 19 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೇಲ್ನೋಟಕ್ಕೆ ಈ ಪಿಚ್ ವೇಗಿಗಳಿಗೆ ನೆರವಾಗುವ ಸೂಚನೆ ನೀಡಿದೆ. ಏಕೆಂದರೆ ಈ ವರೆಗೆ ಒಟ್ಟು 22 ಓವರ್ಗಳು ಸ್ಪಿನ್ ಎಸೆದಿದ್ದರೂ ಒಂದೂ ವಿಕೆಟ್ ಬಿದಿಲ್ಲ. ಇನ್ನೊಂದೆಡೆ ಪಿಚ್ ನಿಧಾನವಾಗಿ ಬ್ಯಾಟಿಂಗ್ ಸ್ನೇಹಿಯಾಗುವಂತೆ ಕಾಣುತ್ತಿದೆ.