Site icon Vistara News

Pro kabaddi | ದಬಾಂಗ್‌ ಡೆಲ್ಲಿಗೆ ಸತತ ಐದು ಜಯ, ರೋಚಕ ಹಣಾಹಣಿಯಲ್ಲಿ ಸೋತ ಹರಿಯಾಣ

pro kabaddi

ಬೆಂಗಳೂರು : ಪ್ರಸಕ್ತ ಋತುವಿನ ವಿವೊ ಪ್ರೋ ಕಬಡ್ಡಿ ಲೀಗ್‌ನಲ್ಲಿಯೇ ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ವಿರುದ್ಧ 38-36 ಅಂತರದಲ್ಲಿ ಜಯ ಗಳಿಸಿದ ದಬಾಂಗ್‌ ಡೆಲ್ಲಿ ಕೆಸಿ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿತು. ನಾಯಕ ನವೀನ್‌ ಕುಮಾರ್‌ 15 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಕೊನೆಯ 40 ಸೆಕೆಂಡುಗಳು ಬಾಕಿ ಇರುವಾಗ ಪಂದ್ಯ 36-36 ರಲ್ಲಿ ಸಮಬಲಗೊಂಡಿತ್ತು. ನವೀನ್‌ ಕುಮಾರ್‌ ಕೊನೆಯ ರೈಡ್‌ನಲ್ಲಿ 2 ಅಂಕಗಳನ್ನು ಗಳಿಸಿ ತಂಡಕ್ಕೆ ಅಮೂಲ್ಯ ಜಯ ತಂದಿತ್ತರು.

ನಾಯಕ ನವೀನ್‌ ಎಕ್ಸ್‌ಪ್ರೆಸ್‌ ರೈಡಿಂಗ್‌ನಲ್ಲಿ 5 ಅಂಕಗಳನ್ನು ಗಳಿಸುವ ಮೂಲಕ ದಬಾಂಗ್‌ ಡೆಲ್ಲಿ ಕೆಸಿ ತಂಡ ಹರಿಯಾಣ ಸ್ಟೀಲರ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 17-12 ಅಂತರದಲ್ಲಿ ಮುನ್ನಡೆಯಿತು. ಡೆಲ್ಲಿ ಪರ ಟ್ಯಾಕಲ್‌ನಲ್ಲಿ ವಿಜಯ ಕುಮಾರ್‌ 2 ಅಂಕಗಳನ್ನು ಗಳಿಸಿ ಒಂದು ಹಂತದಲ್ಲಿ ಸಮಬಲ ಸಾಧಿಸಿದ್ದ ತಂಡಕ್ಕೆ ಮುನ್ನಡೆಗೆ ಅವಕಾಶ ಕಲ್ಪಿಸಿದರು. ರೈಡಿಂಗ್‌ನಲ್ಲಿ ಮಂಜಿತ್‌ ಹಾಗೂ ಅಶು ಮಲಿಕ್‌ ತಲಾ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಹರಿಯಾಣ ಸ್ಟೀಲರ್ಸ್‌ ಪರ ರೈಡಿಂಗ್‌ನಲ್ಲಿ ಮಂಜೀತ್‌ 6 ಅಂಕಗಳನ್ನು ಗಳಿಸಿ ದಿಟ್ಟ ಹೋರಾಟ ನೀಡುವಲ್ಲಿ ಸಫಲರಾದರು.

ಇದನ್ನೂ ಓದಿ | Pro Kabaddi | ಜಯದ ಖಾತೆ ತೆರೆದ ತಮಿಳ್‌ ತಲೈವಾಸ್‌; ಪಾಟ್ನಾ ಪೈರೇಟ್ಸ್‌ ವಿರುದ್ಧ ರೋಚಕ ಜಯ

Exit mobile version