ಭುವನೇಶ್ವರ: ಇಂಟರ್ ಕಾಂಟಿನೆಂಟಲ್ ಕಪ್(Intercontinental Cup) ವಿಜೇತ ಭಾರತದ ಫುಟ್ಬಾಲ್(Football) ತಂಡಕ್ಕೆ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್(Naveen Patnaik) ಅವರು 1 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದ್ದಾರೆ. ಈ ಟೂರ್ನಿಯಲ್ಲಿ ಭಾರತ 2ನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಟ್ರೋಫಿ ವಿತರಣೆ ಮಾಡಿ ಮಾತನಾಡಿದ ಪಟ್ನಾಯಕ್, ಆಟಗಾರರಿಗೆ 1 ಕೋಟಿ ರು. ನಗದು ಬಹುಮಾನ ನೀಡುವುದಾಗಿ ತಿಳಿಸಿದರು. ಇದೇ ವೇಳೆ ಚಾಂಪಿಯನ್ ತಂಡ 20 ಲಕ್ಷ ರೂ. ಮೊತ್ತವನ್ನು ಬಾಲಾಸೋರ್ ರೈಲು ದುರಂತದ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದೆ.
“ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಲೆಬನಾನ್ ವಿರುದ್ಧ 2-0 ಗೋಲುಗಳಿಂದ ಗೆಲುವು ದಾಖಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಭಾರತ ಪರ ನಾಯಕ ಸುನೀಲ್ ಚೆಟ್ರಿ(Sunil Chhetri) ಮತ್ತು ಲಾಲಿಯಂಜೂಲ ಚಂಗೆ(Lallianzuala Chhangte) ಗೋಲು ಬಾರಿಸಿ ಪಂದ್ಯದ ಗೆಲುವಿನ ರುವಾರಿಯಾದರು.
ಇದನ್ನೂ ಓದಿ Viral Video: ತಂದೆಯಾಗುತ್ತಿರುವ ವಿಚಾರವನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ ಸುನೀಲ್ ಚೆಟ್ರಿ; ಮಜವಾಗಿದೆ ವಿಡಿಯೊ
ಪ್ರಶಸ್ತಿ ನೀಡಿ ಮಾತನಾಡಿದ ಸಿಎಂ ನವೀನ್ ಪಟ್ನಾಯಕ್, “ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳು. ನಮ್ಮ ರಾಜ್ಯಕ್ಕೆ ಹಲವು ಕ್ರೀಡಾಕೂಟಗಳ ಆತಿಥ್ಯ ಸಿಗುತ್ತಿರುವುದು ಹೆಮ್ಮೆಯ ಸಂಗತಿ. ಒಡಿಶಾದಲ್ಲಿ ಇನ್ನೂ ಹೆಚ್ಚಿನ ಕ್ರೀಡಾಕೂಟಗಳನ್ನು ಆಯೋಜಿಸಲು ನಾವು ಸಿದ್ಧ ಭಾರತದ ಕ್ರೀಡೆಗೆ ಸೇವೆ ಸಲ್ಲಿಸಲು ನಾವು ಸದಾ ಮುಂಚೂಣಿಯಲ್ಲಿರುತ್ತೇವೆ” ಎಂದರು.
ಇಂದು ಭಾರತಕ್ಕೆ ಉಜ್ಬೇಕಿಸ್ತಾನ ಎದುರಾಳಿ
ಎಎಫ್ಸಿ ಅಂಡರ್-17 ಏಷ್ಯಾಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಇಂದು (ಮಂಗಳವಾರ) ಉಜ್ಬೇಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಸದ್ಯ ಗುಂಪಿನ ಎಲ್ಲ ತಂಡಗಳೂ ತಲಾ 1 ಅಂಕ ಹೊಂದಿದ್ದು, ಜಪಾನ್ ಅಗ್ರಸ್ಥಾನ, ವಿಯೆಟ್ನಾಂ 2, ಉಜ್ಬೇಕಿಸ್ತಾನ 3 ಮತ್ತು ಭಾರತ ಕೊನೆ ಸ್ಥಾನದಲ್ಲಿದೆ. ಹೀಗಾಗಿ ಉಜ್ಬೇಕಿಸ್ತಾನ ವಿರುದ್ಧ ಗೆದ್ದರೆ ಮಾತ್ರ ಭಾರತಕ್ಕೆ ನಾಕೌಟ್ಗೇರುವ ಅವಕಾಶ ಹೆಚ್ಚಿರಲಿದೆ. ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ 1-1 ಗೋಲಿನ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ.