ಜಕಾರ್ತ: ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದಲ್ಲಿ ಅಕ್ಟೋಬರ್ 1 ರಂದು ಸಂಭವಿಸಿದ ಕಾಲ್ತುಳಿತದಲ್ಲಿ 133 ಜನ ಸಾವನ್ನಪ್ಪಿದ ಫುಟ್ಬಾಲ್ (Football) ಕ್ರೀಡಾಂಗಣವನ್ನು ನೆಲಸಮ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರು ಮಂಗಳವಾರ ಈ ಬಗ್ಗೆ ಮಾಹಿತಿ ಪ್ರಕಟಿಸಿದ್ದಾರೆ.
ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೊಕೊ ವಿಡೊಡೊ “ಮಲಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣವನ್ನು ನಾವು ಫಿಫಾ ಮಾನದಂಡಗಳ ಪ್ರಕಾರ ಕೆಡವಿ ಆ ಬಳಿಕ ಮರುನಿರ್ಮಾಣ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಅಕ್ಟೋಬರ್ 1ರಂದು ಪೂರ್ವ ಜಾವಾದ ಮಲಂಗ್ ನಗರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 40ಕ್ಕೂ ಅಧಿಕ ಮಕ್ಕಳು ಸೇರಿದಂತೆ 133 ಮಂದಿ ಮೃತಪಟ್ಟಿದ್ದರು. ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ಬಳಿಕ ಸೋತ ತಂಡದ ಬೆಂಬಲಿಗರು ಮೈದಾನಕ್ಕೆ ನುಗ್ಗಿ ದಾಂದಲೆ ನಡೆಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದ 133 ಜನರು ಮೃತಪಟ್ಟಿದ್ದರು. ಈ ಘಟನೆಗೆ ಫೀಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ “ಫುಟ್ಬಾಲ್ನ ಕರಾಳ ದಿನ” ಎಂದು ಹೇಳಿದ್ದರು.
ಇದನ್ನೂ ಓದಿ | T20 World Cup | ಯುಎಇ ಪರ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ ಆರ್ಸಿಬಿ ನೆಟ್ ಬೌಲರ್ ಕಾರ್ತಿಕ್