ದುಬೈ : ಸದಾ ಆತ್ಮವಿಶ್ವಾಸದ ಖನಿಯಂತೆ ಕಾಣುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯೂ (Virat Kohli), ಮಾನಸಿಕ ಸ್ಥೈರ್ಯ ಕಳೆದುಕೊಂಡಿದ್ದಾರಂತೆ. ತಮಗಾದ ಅನುಭವವನ್ನು ಅವರು ಏಷ್ಯಾ ಕಪ್ ನೇರ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್‌ಸ್ಪೋರ್ಟ್ಸ್ ನಡೆಸಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಒತ್ತಡಕ್ಕೆ ಬಿದ್ದಿದ್ದ ನಾನು ಒಂದು ತಿಂಗಳ ಕಾಲ ಬ್ಯಾಟ್ ಕೂಡ ಮುಟ್ಟಲಿಲ್ಲ. ಕಳೆದ ಹತ್ತು ವರ್ಷದಲ್ಲಿ ಈ ರೀತಿ ನಡೆಯುತ್ತಿರುವುದು ಇದೇ ಮೊದಲು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಕಳೆದ ಇಂಗ್ಲೆಂಡ್ ಟೂರ್ ಬಳಿಕ ವಿರಾಟ್ ಕೊಹ್ಲಿ ಒಂದು ತಿಂಗಳ ಕಾಲ ಕ್ರಿಕೆಟ್‌ನಿಂದ ಬ್ರೇಕ್ ಪಡೆದುಕೊಂಡಿದ್ದರು. ಈ ವೇಳೆ ಅವರು ಅಭ್ಯಾಸ ನಡೆಸುವುದಿರಲಿ. ಬ್ಯಾಟ್ ಕೂಡ ಮುಟ್ಟಿರಲಿಲ್ಲ. ಅಷ್ಟೊಂದು ಮಟ್ಟಿಗೆ ಅವರು ಮಾನಸಿಕವಾಗಿ ನೊಂದಿದ್ದರು ಎಂದು ಹೇಳಿಕೊಂಡಿದ್ದಾರೆ.
“ಕಳೆದ ೧೦ ವರ್ಷಗಳಲ್ಲಿ ಅದೇ ಮೊದಲ ಬಾರಿ ನಾನು ಒಂದು ತಿಂಗಳ ಕಾಲ ಬ್ಯಾಟ್ ಮುಟ್ಟಿರಲಿಲ್ಲ. ನಾನು ನನ್ನ ಆಕ್ರಮಣಶೀಲತೆಯನ್ನು ನಕಲು ಮಾಡುತ್ತಿದ್ದೇನೆ ಎಂದು ಅನಿಸಿತ್ತು. ಆದರೆ, ನನಲ್ಲಿ ಇನ್ನೂ ಆಕ್ರಮಣಶೀಲತೆ ಉಳಿದುಕೊಂಡಿದೆ ಎಂದು ನಾನು ನನ್ನಷ್ಟಕ್ಕೆ ಸಮಾಧಾನ ಮಾಡಿಕೊಳ್ಳಬೇಕಾಗಿತ್ತು. ನನ್ನ ದೇಹ ಅವೆಲ್ಲವನ್ನೂ ನಿಲ್ಲಿಸು ಎಂದು ಹೇಳುತ್ತಿತ್ತು ಹಾಗೂ ನನ್ನ ಮನಸ್ಸು ವಿಶ್ರಾಂತಿ ಪಡೆಯುವಂತೆ ಹೇಳುತ್ತಿತ್ತು,” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
“ನಾನು ಮಾನಸಿಕವಾಗಿ ಕುಸಿದಿದ್ದೆ ಎಂಬುದನ್ನು ಹೇಳಿಕೊಳ್ಳುವುದಕ್ಕೆ ನನಗೆ ನಾಚಿಕೆಯಿಲ್ಲ. ಇದು ಸಾಮಾನ್ಯ ಸಂಗತಿಯಾಗಿದ್ದರೂ, ನಾವು ಅದರ ಬಗ್ಗೆ ಮಾತನಾಡಲು ಹಿಂಜರಿಯುತ್ತೇವೆ. ಯಾಕೆಂದರೆ ಯಾರೂ ನಾವು ಮಾನಸಿಕವಾಗಿ ದುರ್ಬಲ ಎಂದು ತೋರಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಆದರೆ, ತೋರಿಕೆಯ ಧೈರ್ಯ ಹೇಳಿಕೊಳ್ಳುವುದಕ್ಕಿಂತ ಕೆಟ್ಟದು,” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಎಲ್ಲದಕ್ಕೂ ಮಿತಿಯಿದೆ
ಎಲ್ಲರೂ ನಾನು ಮಾನಸಿಕವಾಗಿ ಸಾಕಷ್ಟೂ ದೃಢವಾಗಿದ್ದೇನೆ ಎಂದುಕೊಂಡಿದ್ದೇನೆ ಹಾಗೂ ಆಗಿಯೂ ಇದ್ದೇ. ಆದರೆ, ಎಲ್ಲದಕ್ಕೂ ಒಂದು ಮಿತಿಯಿದೆ ಹಾಗೂ ಆ ಮಿತಿಯನ್ನು ಅರಿತುಕೊಳ್ಳಬೇಕಾಗುತ್ತದೆ. ಹಾಗೇನಾದರೂ ಮಾಡದಿದ್ದರೆ ಅದು ಅನಾರೋಗ್ಯಕರ ಎನಿಸಿಕೊಳ್ಳಬಹುದು. ಈ ಅವಧಿಯಲ್ಲಿ ನಾನು ಸಾಕಷ್ಟು ಕಲಿತುಕೊಂಡೆ ಹಾಗೂ ಒಂದು ಬಾರಿ ಪರಿಸ್ಥಿತಿ ಎದುರಾದಾಗ ನಾನು ಅದನ್ನು ಒಪ್ಪಿಕೊಂಡೆ,” ಎಂದು ಅವರು ಹೇಳಿದ್ದಾರೆ.
ಆಕ್ರಮಣಶೀಳತೆ ಅನಿವಾರ್ಯ ಹಾಗೂ ಕೃತಕ
ಬಿಸಿಸಿಐ ಟಿವಿ ನಡೆಸಿದ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ತಮ್ಮ ಅತಿಯಾದ ಆಕ್ರಮಣಶೀಲತೆ ಕೃತಕ ಎಂಬುದಾಗಿ ಹೇಳಿಕೊಂಡಿದ್ದಾರೆ.
“ಸಾಕಷ್ಟು ಮಂದಿ ನಾನು ಮೈದಾನದಲ್ಲಿ ಅತಿ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ಕೆಲವೊಂದು ಬಾರಿ ನಾನು ಕೃತಕವಾಗಿ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತೇನೆ. ಹೇಗಾದರೂ ಮಾಡಿ ಪಂದ್ಯ ಗೆಲ್ಲಲೇಬೇಕು ಎಂದು ಮೈದಾನಕ್ಕೆ ಇಳಿಯವಾಗಿ ಇಂಥ ವರ್ತನೆಯನ್ನು ಅತಿಯಾಗಿ ಪ್ರದರ್ಶಿಸುತ್ತೇನೆ. ಎಲ್ಲವೂ ನೈಜವಲ್ಲ. ಕೆಲವೊಂದು ಸಂದರ್ಭಕ್ಕೆ ತಕ್ಕ ಹಾಗೆ ಸೃಷ್ಟಿ ಮಾಡಿಕೊಂಡಿದ್ದು,” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ನನ್ನ ಸಹ ಆಟಗಾರರು ಸೇರಿದಂತೆ ಸಾಕಷ್ಟು ಮಂದಿ ನನ್ನ ಅಕ್ರಮಣಶೀಲತೆಯನ್ನು ಪ್ರಶ್ನಿಸಿದ್ದಾರೆ. ಆದರೆ, ನಾನು ಅವರಿಗೆ ಹೇಳುವ ಉತ್ತರ ಇಷ್ಟೆ. ನನಗೆ ಪ್ರತಿಯೊಂದು ಎಸೆತವೂ ಪ್ರಮುಖ. ಗೆಲುವೇ ನನ್ನ ಉದ್ದೇಶವಾಗಿದೆ. ನಾನು ಆಟವನ್ನು ಪ್ರೀತಿ ಮಾಡುತ್ತೇನೆ ಹಾಗೂ ಎಲ್ಲ ಸಂದರ್ಭದಲ್ಲೂ ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ.
“ಮೈದಾನದಲ್ಲಿ ನನ್ನ ವರ್ತನೆ ಯಾವತ್ತಿಗೂ ಅಸಹಜ ಎಂದು ಅನಿಸಿರಲಿಲ್ಲ. ಹೊರಗೆ ನಿಂತು ನೋಡುವ ಸಾಕಷ್ಟು ಮಂದಿಗೆ ಹಾಗೆ ಅನಿಸಿದೆ. ಆದರೆ, ಅವರೆಲ್ಲರಿಗೂ ನಾನು ಕೊಡುವ ಉತ್ತರ ಇಷ್ಟೆ. ನನಗೆ ಪಂದ್ಯ ಗೆಲ್ಲಬೇಕು ಅಷ್ಟೆ ಎಂಬುದಾಗಿ,” ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ | Asia Cup- 2022 | ಮ್ಯಾಕ್ಸ್‌ವೆಲ್ ರೀತಿ ರಿವರ್ಸ್ ಸ್ವೀಪ್ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ ವಿರಾಟ್ ಕೊಹ್ಲಿ