ನವದೆಹಲಿ : ಭಾರತದ ಕ್ರಿಕೆಟ್ (Team India) ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುತ್ತಿರುವ ಕ್ರಮವನ್ನು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಹೊಗಳಿದ್ದು, ಇಂಥ ವ್ಯವಸ್ಥೆಯನ್ನು ಪಾಕಿಸ್ತಾನದಲ್ಲಿ ಯಾವಾಗ ಜಾರಿಗೆ ತರುವುದು ಎಂದು ಪ್ರಶ್ನಿಸಿದ್ದಾರೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಕೆ.ಎಲ್ ರಾಹುಲ್ ನೇತೃತ್ವದ ತಂಡವನ್ನು ಜಿಂಬಾಬ್ವೆಗೆ ಕಳುಹಿಸಿರುವುದನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನು ಆಡಿದ್ದಾರೆ.
ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಕೆ. ಎಲ್ ರಾಹುಲ್ ನೇತೃತ್ವದ ಭಾರತ ತಂಡ ಅಭ್ಯಾಸ ಆರಂಭಿಸಿದೆ. ಕಾಯಂ ಕೋಚ್ ರಾಹುಲ್ ದ್ರಾವಿಡ್ ಅವರ ಬದಲಾಗಿ ಈ ಬಾರಿ ವಿವಿಎಸ್ ಲಕ್ಷ್ಮಣ್ ಅವರನ್ನು ಜಿಂಬಾಬ್ವೆಗೆ ಕಳುಹಿಸಲಾಗಿದೆ. ಈ ಸಂಗತಿಯನ್ನು ಉಲ್ಲೇಖಿಸಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸಲ್ಮಾನ್ “ರಾಹುಲ್ ಅವರು ಈ ಹಿಂದೆಯೂ ಭಾರತ ತಂಡದ ನೇತೃತ್ವ ವಹಿಸಿದ್ದರು. ಹೀಗಾಗಿ ಅವರಿಗೆ ಮತ್ತೆ ನಾಯಕತ್ವದ ಹೊಣೆ ನೀಡಲಾಗಿದೆ. ಜತೆಗೆ ಯುವ ಆಟಗಾರರಿಗೆ ಅವಕಾಶವನ್ನೂ ಕಲ್ಪಿಸಲಾಗಿದೆ. ಅಲ್ಲದೆ, ಕಾಯಂ ಕೋಚ್ ಬದಲಿಗೆ ವಿವಿಎಸ್ ಲಕ್ಷ್ಮಣ್‌ಗೂ ಅವಕಾಶ ನೀಡಲಾಗಿದೆ. ಇದರಿಂದ ಹೊಸ ಹೊಸ ಪ್ರತಿಭೆಗಳನ್ನು ಅನ್ವೇಷಣೆ ಮಾಡಲು ಬಿಸಿಸಿಐಗೆ ಸಾಧ್ಯವಾಗಿದೆ,” ಎಂದು ಅವರು ಹೇಳಿದರು.
“ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಸಿಬ್ಬಂದಿಗಳನ್ನು ಅಲ್ಲಿ ಬಿಟ್ಟು ಕೋಚಿಂಗ್ ಕೆಲಸವನ್ನು ಮಾಡಲು ಮುಂದಾಗಿದ್ದಾರೆ. ಅದೇ ವೇಳೆ ದ್ರಾವಿಡ್‌ಗೆ ವಿಶ್ರಾಂತಿ ನೀಡಲಾಗಿದೆ. ಇದು ಮಾನವ ಸಂಪನ್ಮೂಲ ಬೆಳವಣಿಗೆಗೆ ಪೂರಕವಾಗಿದೆ,” ಎಂದು ಅವರು ಹೇಳಿದರು.
“ಪಾಕಿಸ್ತಾನದಲ್ಲಿ ಅಂಥದ್ದೊಂದು ವ್ಯವಸ್ಥೆ ಇಲ್ಲ. ಇಲ್ಲಿ ವ್ಯವಸ್ಥೆಯನ್ನು ಬೆಳೆಸುವುದಕ್ಕಿಂತ ಹೆಚ್ಚಾಗಿ ಮುಳುಗಿಸಲಾಗುತ್ತದೆ. ವಿದೇಶಗಳಿಂದ ಕೋಚ್‌ಗಳನ್ನು ತರುವುದನ್ನೇ ರೂಡಿ ಮಾಡಿಕೊಳ್ಳಲಾಗಿದೆ,” ಎಂದು ಹೇಳಿದರು.
ಇದನ್ನೂ ಓದಿ | Royal London Cup | ರೊಚ್ಚಿಗೆದ್ದ ಚೇತೇಶ್ವರ್ ಪೂಜಾರ, ಬೆಚ್ಚಿ ಬಿದ್ದ ಸರ್ರೆ