ಮೆಲ್ಬೊರ್ನ್ : ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಳೆ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ಬಂಧನಕ್ಕೆ ಒಳಗಾಗಿದ್ದಾರೆ. ಮೈಕೆಲ್ ಸ್ಲೇಟರ್ ಅವರು ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರ ಆರೋಪಿಯಾಗಿದ್ದರು. ಈ ಪ್ರಕರಣದಲ್ಲಿ ಅವರನ್ನು ವಿಚಾರಿಸಲು ಹೋದ ಪೊಲೀಸರ ಮೇಲೆ ಸ್ಲೇಟರ್ ದೌರ್ಜನ್ಯ ನಡೆಸಿದ್ದರು. ಈ ಪ್ರಕರಣದಲ್ಲಿ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
53 ವರ್ಷದ ಮೈಕೆಲ್ ಸ್ಲೇಟರ್ ಅವರನ್ನು ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ಮಾಡಲು ಮುಂದಾಗಿದ್ದರು. ಈ ವೇಳೆ ಅವರ ವಿರುದ್ಧವೇ ತಿರುಗಿ ಬಿದ್ದು ಹಲ್ಲೆ ಮಾಡಿದ್ದರು. ಸ್ಲೇಟರ್ ದಾಳಿಯಿಂದಾಗಿ ಪೊಲೀಸರ ಕೈಗೆ ಗಾಯವಾಗಿದೆ. ಆದರೆ ಬಂಧನದ ಬಳಿಕ ಏನು ನಡೆದಿದೆ ಎಂಬದರ ಬಗ್ಗೆ ಪೊಲೀಸರು ಸಮರ್ಪಕ ಮಾಹಿತಿ ನೀಡಿಲ್ಲ. ಕೌಟುಂಬಿಕ ದೌರ್ಜನ್ಯದ ಪ್ರಕರಣವಾಗಿದ್ದರಿಂದ ವಿಷಯವನ್ನು ಗೌಪ್ಯವಾಗಿ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 2ರಂದು ಸ್ಲೇಟರ್ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮಾನಸಿಕ ಸಮಸ್ಯೆ
ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ಕುಡಿತದ ಚಟಕ್ಕೆ ಬಿದ್ದಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ಸಮಸ್ಯೆ ಉಲ್ಬಣಗೊಂಡು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದರ ಪರಿಣಾಮವಾಗಿ ಕೌಟುಂಬಿಕ ಸಮಸ್ಯೆಯೂ ತಲೆದೋರಿತ್ತು. ಈ ವಿಷಯದಲ್ಲಿ ಅವರ ವಿರುದ್ಧ ಕೋರ್ಟ್ ಕೇಸ್ ದಾಖಲಾಗಿದೆ.
ಮೈಕೆಲ್ ಸ್ಲೇಟರ್ ಅವರು ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಆಧಾರ ಸ್ತಂಭ ಎನಿಸಿಕೊಂಡಿದ್ದರು. 74 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಅವರು 5312 ರನ್ಗಳನ್ನು ಬಾರಿಸಿದ್ದಾರೆ. ಅದೇ ರೀತಿ 42 ಏಕ ದಿನ ಪಂದ್ಯಗಳಲ್ಲಿ 2004 ರನ್ ಕಲೆ ಹಾಕಿದ್ದಾರೆ. ಆಟಕ್ಕೆ ವಿದಾಯ ಹೇಳಿದ ಬಳಿಕ ಅವರು ಕಾಮೆಂಟೇಟರ್ ಆಗಿ ಮುಂದುವರಿದಿದ್ದರು.
ಇದನ್ನೂ ಓದಿ : Navjot Singh Sidhu: ಜೈಲಿಂದ ಸಿಕ್ಸರ್ ಸಿಧು ಬಿಡುಗಡೆ, ಪಂಜಾಬ್‌ನಲ್ಲಿ ಪ್ರಜಾಪ್ರಭುತ್ವ ನಿರ್ನಾಮ ಎಂದು ಆಕ್ರೋಶ
ಕೊರೊನಾ ಸಮಯದಲ್ಲೂ ಮೈಕೆಲ್ ಸ್ಲೇಟರ್ ಸುದ್ದಿಯಾಗಿದ್ದರು. ಭಾರತದಿಂದ ಆಸ್ಟ್ರೇಲಿಯಾಗೆ ವಿಮಾನ ಸೇವೆ ನಿಷೇಧ ಮಾಡಿದ್ದಾಗ ಅವರು ಸರಕಾರವನ್ನು ಟೀಕಿಸಿದ್ದರು. ಅದೇ ರೀತಿ ಅವರು ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದಲ್ಲೂ ಎರಡು ವರ್ಷ ಜೈಲು ಶಿಕ್ಷೆ ಎದುರಿಸಿದ್ದಾರೆ.
ಸದಾ ವಿವಾದ
ಮೈಕೆಲ್ ಸ್ಲೇಟರ್ ಕ್ರಿಕೆಟ್ ತಂಡದಲ್ಲಿ ಅವಕಾಶ ಕಳೆದುಕೊಂಡ ಬಳಿಕ ಗೊಂದಲಕ್ಕೆ ಬಿದ್ದಿದ್ದರು. ಆದಾಗ್ಯೂ 2004ರವರೆಗೆ ದೇಶಿಯ ಕ್ರಿಕೆಟ್ನಲ್ಲಿ ಅವಕಾಶ ಪಡೆದುಕೊಳ್ಳುತ್ತಿದ್ದರು. ಅದು ಮುಗಿದ ಬಳಿಕ ಕಾಮೆಂಟೇಟರ್ ಅಗಿ ವೃತ್ತಿ ಮುಂದುವರಿಸಿದ್ದರೂ ವೈಯಕ್ತಿಕ ಬದುಕು ಹದಗೆಟ್ಟಿತ್ತು. ಪ್ರಮುಖವಾಗಿ ಅವರು ಮದ್ಯಕ್ಕೆ ದಾಸನಾಗಿದ್ದರು. ನಿರಂತರ ಕುಡಿತದಿಂದಾಗಿ ಆರೋಗ್ಯ ಹದಗೆಡುವ ಜತೆಗೆ ಮಾನಸಿಕ ಸ್ಥಿರತೆಯನ್ನು ನಷ್ಟ ಮಾಡಿಕೊಂಡಿದ್ದರು. ಅನವಶ್ಯಕ ಹಾಗೂ ಸಿಟ್ಟು ಸೆಡವು ತೋರಿಸಿಕಂಡು ಎದುರಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿದ್ದರು. ಈ ವರ್ತನೆಯಿಂದಾಗಿ ಅವರು ಕೌಟುಂಬಿಕ ಸಮಸ್ಯೆಗೆ ಒಳಗಾಗಿದ್ದರು.