ಮೆಲ್ಬೋರ್ನ್ : 2019ರ ಬಳಿಕ ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಸೆಂಚುರಿ ಬಾರಿಸಿಲ್ಲ. ಏಕ ದಿನ ಹಾಗೂ ಟಿ20 ಮಾದರಿಯಲ್ಲಿ ಅವರು ಫಾರ್ಮ್ ಕಳೆದುಕೊಂಡರೂ ಟೆಸ್ಟ್ ಮಾದರಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಈ ಮೂಲಕ ಅವರಿನ್ನೂ ಚರ್ಚೆಗೆ ಆಸ್ಪದ ನೀಡುತ್ತಲೇ ಇದ್ದಾರೆ. 2020ರ ಬಳಿಕ 23 ಟೆಸ್ಟ್ ಪಂದ್ಯಗಳಲ್ಲಿ 1028 ರನ್ ಬಾರಿಸಿದ್ದು ಒಂದೇ ಒಂದು ಅರ್ಧ ಶತಕ ಮಾತ್ರ ಸೇರಿಕೊಂಡಿದೆ. ಏಕ ದಿನ ಮಾದರಿಯಲ್ಲಿ ವಿರಾಟ್ ಶತಕ ಬಾರಿಸಿದಾಗ ಮತ್ತೆ ಟೆಸ್ಟ್ನಲ್ಲೂ ಉತ್ತಮ ಪ್ರದರ್ಶನ ನೀಡಬಹುದು ಎಂದು ಅಂದುಕೊಳ್ಳಲಾಗಿತ್ತು. ಆದರೆ, ಬಾಂಗ್ಲಾದೇಶ ಪ್ರವಾಸ ಹಾಗೂ ಆಸ್ಟ್ರಲಿಯಾ ವಿರುದ್ಧದ ಸರಣಿಯ ಮೂರೂ ಪಂದ್ಯದಲ್ಲಿ ಅವರು ಪ್ರಭಾವ ಬೀರಿಲ್ಲ. ಈ ಕುರಿತು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಟೀಕೆ ವ್ಯಕ್ತಪಡಿಸಿದ್ದಾರೆ.
ಪಾಕ್ಸ್ ಕ್ರಿಕೆಟ್ ಜತೆ ಮಾತನಾಡಿದ ಅವರು, ಸ್ಟಾರ್ ಬ್ಯಾಟರ್ಗಳು ಈ ರೀತಿಯಾಗಿ ಶತಕಗಳ ಬರ ಎದುರಿಸುತ್ತಿರುವುದು ಸರಿಯಲ್ಲ ಎಂದು ಅನಿಸುತ್ತದೆ. ಕೆಲವು ದಿನಗಳ ಹಿಂದೆ ಅವರು ಮತ್ತೆ ಫಾರ್ಮ್ಗೆ ಮರಳಿದ್ದರು. ಏಕ ದಿನ ಕ್ರಿಕೆಟ್ನಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟ್ ಮಾಡಿದ್ದರು. ಇದೊಂದು ಟೆಸ್ಟ್ ಪಂದ್ಯ ಎಂಬುದು ಗೊತ್ತಿದೆ. ಆದರೆ, ವಿರಾಟ್ ಕೊಹ್ಲಿ ಟೆಸ್ಟ್ನಲ್ಲಿಯೇ ಉತ್ತಮ ಆಟಗಾರ. ಈಗಲೂ ಚೆನ್ನಾಗಿ ಡಿಫೆನ್ಸ್ ಮಾಡುವ ಸಾಮರ್ಥ್ಯ ಅವರಿಗೆ ಇದೆ, ಆದರೆ ಶಾಟ್ ಸೆಲೆಕ್ಷನ್ ವಿಚಾರದಲ್ಲಿ ಸೋತಿದ್ದಾರೆ. ಅದೃಷ್ಟವೂ ಅವರಿಗೆ ಕೈಕೊಟ್ಟಿದೆ. ಒಂದು ಸಣ್ಣ ತಪ್ಪಿಗೂ ಬೆಲೆ ತೆರುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Virat Kohli: 2020ರ ಬಳಿಕ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸಾಧನೆ
ವಿರಾಟ್ ಕೊಹ್ಲಿ ವಿಶ್ವ ದರ್ಜೆಯ ಆಟಗಾರ. ಒಂದು ಶತಕವೆಂಬುದು ಅವರಿಗೆ ಸವಾಲೇ ಅಲ್ಲ. ಆದರೆ, ವಿರಾಟ್ ಒತ್ತಡಕ್ಕೆ ಬಿದ್ದಿರುವುದು ನಿಶ್ಚಿತ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಅವರು ಬ್ಯಾಟಿಂಗ್ಗೆ ಬರುವಾಗ ಹಾಗೂ ಮಧ್ಯದಲ್ಲಿ ಔಟಾಗಿ ಹೋಗುವಾಗ ಒತ್ತಡಕ್ಕೆ ಬೀಳುತ್ತಿದ್ದಾರೆ ಎಂಬುದೇ ನನ್ನ ಅನಿಸಿಕೆ ಎಂದು ಮಾರ್ಕ್ ವಾ ಹೇಳಿದ್ದಾರೆ.