ಮುಂಬಯಿ : ಕನ್ನಡಿಗ ಹಾಗೂ ಟೀಮ್ ಇಂಡಿಯಾದ (Indian Cricket Team) ಆರಂಭಿಕ ಬ್ಯಾಟರ್ ಕೆ. ಎಲ್ ರಾಹುಲ್ ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ. ಅವರು ಅಗತ್ಯ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂಬುದೇ ಅವರೆಲ್ಲರ ಬೇಸರ. ರಾಹುಲ್ ಅವರ ಪ್ರದರ್ಶನ ಇದೇ ರೀತಿ ಮುಂದುವರಿದರೆ ತಂಡದಲ್ಲಿ ಅವರು ಅವಕಾಶ ಕಳೆದುಕೊಳ್ಳುವುದು ಬಹುತೇಕ ನಿಶ್ಚಿತ. ಈ ಹಿನ್ನೆಲೆಯಲ್ಲಿ ಮಾತನಾಡಿದ ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ, ಅವರ ಸ್ಥಾನಕ್ಕೆ ಬೇರೆ ಆಟಗಾರನನ್ನು ಸೂಚಿಸಿದ್ದಾರೆ.
ಜಾರ್ಖಂಡ್ನ ಯುವ ಬ್ಯಾಟರ್ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅತಿ ವೇಗದ ದ್ವಿ ಶತಕ ಬಾರಿಸಿರುವ ಇಶಾನ್ ಕಿಶನ್ ಅವರೇ ಬ್ರೆಟ್ ಲೀ ಅವರ ಆಯ್ಕೆಯಾಗಿದೆ. ರಾಹುಲ್ ಅವರನ್ನು ತಂಡದಿಂದ ಹೊರಕ್ಕೆ ಇಡುವುದಾದರೆ ಎಡಗೈ ಬ್ಯಾಟರ್ಗೆ ವಿಶ್ವ ಕಪ್ನಲ್ಲಿ ಇನಿಂಗ್ಸ್ ಆರಂಭಿಸುವ ಹೊಣೆಗಾರಿಕೆ ನೀಡಬಹುದು ಎಂಬುದಾಗಿ ಅವರು ಹೇಳಿದ್ದಾರೆ.
ಅತಿ ವೇಗದಲ್ಲಿ ದ್ವಿ ಶತಕ ಬಾರಿಸಿರುವ ಇಶಾನ್ ಕಿಶನ್ ಅವರು ವಿಶ್ವ ಕಪ್ನಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅದು ಸಾಧ್ಯವೇ ಎಂಬುದು ಗೊತ್ತಿಲ್ಲ. ಆದರೆ, ಬ್ಯಾಟಿಂಗ್ನಲ್ಲಿ ಸ್ಥಿರತೆ ಕಾಪಾಡಿಕೊಂಡರೆ ಅದು ಸಾಧ್ಯವಿದೆ. ಇನ್ನು ಕೆಲವು ತಿಂಗಳುಗಳು ಬಾಕಿ ಇದ್ದು, ಆ ಅವಧಿಯಲ್ಲಿ ಅವರು ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಾಗಿದೆ, ಎಂದು ಬ್ರೆಟ್ ಲೀ ಕಿವಿ ಮಾತು ಹೇಳಿದ್ದಾರೆ.
ಒಂದು ದ್ವಿ ಶತಕ ಬಾರಿಸಿದ ತಕ್ಷಣ ಇಶಾನ್ ಉತ್ತಮ ಆಯ್ಕೆ ಎಂದು ಒಪ್ಪುವುದಾದರೂ ಅವರು ನಿರಂತರ ಅದೇ ರೀತಿಯ ಪ್ರದರ್ಶನ ನೀಡಬೇಕಾಗುತ್ತದೆ. ಒಂದೇ ಒಂದು ಸಾಧನೆಯನ್ನು ಪರಿಗಣಿಸುವುದು ಸಾಧ್ಯವಿಲ್ಲ. ಅವರ ಕಡೆಗೆ ಬರುತ್ತಿರುವ ಪ್ರಶಂಸೆಗಳನ್ನು ಮೀರಿ ಅವರು ಆಡಬೇಕಾಗಿದೆ ಎಂದು ಬ್ರೆಟ್ ಲೀ ಇದೇ ವೇಳೆ ನುಡಿದಿದ್ದಾರೆ.
ಇದನ್ನೂ ಓದಿ | Icc Ranking | ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಬರೋಬ್ಬರಿ 117 ಸ್ಥಾನ ಏರಿಕೆ ಕಂಡ ಇಶಾನ್ ಕಿಶನ್!