ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಹಣಾಹಣಿಯೆಂದರೆ ಜಿದ್ದಾಜಿದ್ದಿ ಜೋರು. ಹಿರಿಯ ಆಟಗಾರರ ನಡುವಿನ ವಾಕ್ಸಮರಕ್ಕೂ ಮಿತಿ ಇರುವುದಿಲ್ಲ. ಅದಕ್ಕೀಗ ಹೊಸ ಸೇರ್ಪಡೆ ರವೀಂದ್ರ ಜಡೇಜಾ (Ravindra Jadeja) ಕೈ ನೋವಿನ ಮುಲಾಮು ಹಚ್ಚಿಕೊಂಡಿರುವ ಪ್ರಕರಣ. ಬೆರಳಿನ ನೋವಿಗೆ ಅವರು ಹಚ್ಚಿಕೊಂಡಿದ್ದ ನೋವು ನಿವಾರಕ ಮುಲಾಮನ್ನೇ ದೊಡ್ಡದಾಗಿಸಿದ್ದ ಆಸ್ಟ್ರೇಲಿಯಾದ ಮಾಧ್ಯಮವೊಂದು, ಅದಕ್ಕೆ ಮೋಸದಾಟದ ಬಣ್ಣ ಕಟ್ಟಲು ಮುಂದಾಗಿತ್ತು. ಅಚ್ಚರಿಯೆಂದರೆ ಭಾರತ ತಂಡದ ಮಾಜಿ ಆಟಗಾರ ಮೈಕೆಲ್ ವಾನ್ ಕೂಡ ಇಂಥದ್ದೊಂದು ಸುಳ್ಳು ಸುದ್ದಿಯನ್ನು ಕೋಟ್ ಸಮೇತ ರಿಟ್ವೀಟ್ ಮಾಡಿದ್ದರು. ಅದಕ್ಕೆ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಕೆಂಡಾಮಂಡಲರಾಗಿದ್ದಾರೆ.
ನಾನು ಈ ಪ್ರಸಂಗದ ಬಗ್ಗೆ ಎರಡೇ ಎರಡು ಪ್ರಶ್ನೆಗಳನ್ನು ಮುಂದಿಡುತ್ತೇನೆ. ರವೀಂದ್ರ ಜಡೇಜಾ ಅವರು ಕೈಗೆ ಮುಲಾಮು ಹಚ್ಚಿಕೊಂಡಿರುವುದರಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಏನಾದರೂ ತೊಂದರೆ ಆಗಿದೆಯೇ. ಆಗಿಲ್ಲ ಎಂದಾದರೆ ಅದನ್ನು ದೊಡ್ಡ ವಿವಾದ ಮಾಡುವ ಅವಶ್ಯಕತೆ ಏನಿದೆ? ಎರಡನೇ ಪ್ರಶ್ನೆ. ರವೀಂದ್ರ ಜಡೇಜಾ ಅವರು ಮುಲಾಮು ಹಚ್ಚಿಕೊಂಡಿರುವ ವಿಚಾರದ ಬಗ್ಗೆ ಮ್ಯಾಚ್ ರೆಫರಿ ಏನಾದರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆಯೇ? ಅವರೇನಾದರೂ ಪ್ರಕರಣದ ಕುರಿತು ಮಧ್ಯಪ್ರವೇಶ ಮಾಡಿದ್ದಾರೆಯೇ. ಇವೆರಡೂ ಸಮಸ್ಯೆ ಇಲ್ಲ ಎಂದಾದರೆ ಸುಮ್ಮನೆ ವಿವಾದ ಮಾಡುವ ಅಗತ್ಯವಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮೈಕೆಲ್ ವಾನ್ ಸೇರಿದಂತೆ ಹಲವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : IND VS AUS: ಜಡೇಜಾ ಬೆರಳಿಗೆ ಹಚ್ಚಿಕೊಂಡಿದ್ದೇನು?; ಸ್ಪಷ್ಟೀಕರಣ ನೀಡಿದ ಬಿಸಿಸಿಐ
ಅದಕ್ಕಿಂತ ಮೊದಲು ಆಸ್ಟ್ರೇಲಿಯಾದ ಮಾಧ್ಯಮಗಳ ವರ್ತನೆಗೆ ಬಿಸಿಸಿಐ ಕೂಡ ಬೇಸರ ವ್ಯಕ್ತಪಡಿಸಿತ್ತು. ಯಾವುದೇ ಒಂದು ವಿಷಯವನ್ನು ವರದಿ ಮಾಡುವಾಗ ಪೂರ್ವಾಪರ ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ಕೊಟ್ಟಿದೆ. ಪಂದ್ಯದ ಮೊದಲ ದಿನ ಭಾರತ ತಂಡದ ಸ್ಪಿನ್ ಬೌಲರ್ ರವೀಂದ್ರ ಜಡೇಜಾ 47 ರನ್ಗಳಿಗೆ 5 ವಿಕಟ್ ಕಬಳಿಸಿದ್ದರು. ಅವರ ಉತ್ತಮ ಬೌಲಿಂಗ್ ನೆರವಿನಿಂದ ಭಾರತ ತಂಡ ಎದುರಾಳಿ ಆಸ್ಟ್ರೇಲಿಯಾವನ್ನು 177 ರನ್ಗಳಿಗೆ ನಿಯಂತ್ರಿಸಿತು.