ಮುಂಬಯಿ : ರೋಹಿತ್ ಶರ್ಮ ನೇತೃತ್ವದ ಭಾರತ ತಂಡ (Team India) ಟಿ೨೦ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ತೆರಳಿ ಅಲ್ಲಿ ಅಭ್ಯಾಸ ಆರಂಭಿಸಿದೆ. ಅಕ್ಟೋಬರ್ ೨೩ರಂದು ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ ಆಡಲಿದೆ. ಭಾರತ ತಂಡದ ಬ್ಯಾಟಿಂಗ್ ಬಿರುಸು ನೋಡಿದರೆ ಈ ಬಾರಿಯ ಪ್ರಶಸ್ತಿ ಫೇವರಿಟ್ ಎಂದೂ ಎನಿಸಿಕೊಂಡಿದೆ. ಆದರೆ, ಮಾಜಿ ಕೋಚ್ ರವಿ ಶಾಸ್ತ್ರಿ ಅವರ ಪ್ರಕಾರ ತಂಡದಲ್ಲೊಂದು ಗಂಭೀರ ಸಮಸ್ಯೆಯಿದೆ. ಬಿಸಿಸಿಐ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಲೇಬೇಕು ಎಂಬುದಾಗಿ ಅವರು ಹೇಳಿದ್ದಾರೆ.
ಮುಂಬಯಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಂಡದ ಬೌಲಿಂಗ್ ವಿಭಾಗವು ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಡೆತ್ ಓವರ್ ಬೌಲಿಂಗ್‌ನಲ್ಲಿ ಬೌಲರ್‌ಗಳು ಪರಿಣಾಮಕಾರಿಯಾಗಿಲ್ಲ. ಲೆಕ್ಕಕ್ಕಿಂತ ಜಾಸ್ತಿ ರನ್ ಬಿಟ್ಟು ಕೊಡುವ ಮೂಲಕ ಗೆಲುವಿಗಾಗಿ ಪರದಾಡುವ ಸ್ಥಿತಿಯನ್ನು ಸೃಷ್ಟಿಸಿಕೊಳ್ಳಲಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ.
ಜಸ್‌ಪ್ರಿತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು, ದೀಪಕ್ ಚಾಹರ್ ಅವರು ವಿಶ್ವ ಕಪ್‌ನಿಂದ ಔಟ್ ಆಗಿರುವುದು ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಕಾರಣ ತಂಡಕ್ಕೆ ಅಲಭ್ಯರಾಗಿರುವುದರ ಬಗ್ಗೆ ರವಿ ಶಾಸ್ತ್ರಿ ಕಳವಳ ವ್ಯಕ್ತಪಡಿಸಿದ್ದಾರೆ. ಲಭ್ಯವಿರುವ ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್ ಹಾಗೂ ಹರ್ಷಲ್ ಪಟೇಲ್ ಎದುರಾಳಿ ತಂಡಕ್ಕೆ ರನ್ ಬಿಟ್ಟುಕೊಡುತ್ತಿರುವುದು ಅವರ ಆತಂಕಕ್ಕೆ ಕಾರಣವಾಗಿದೆ.
ಬಿಸಿಸಿಐ ಅಧ್ಯಕ್ಷರು ಗಮನಿಸಲಿ
ಗಾಯದ ಸಮಸ್ಯೆ ಗಂಭೀರ ರೂಪ ಪಡೆಯುತ್ತಿದೆ. ಪ್ರಮುಖವಾಗಿ ಐಪಿಎಲ್ ಒತ್ತಡದಿಂದಾಗಿ ಆಟಗಾರರು ಟೀಮ್ ಇಂಡಿಯಾದ ಸೇವೆಗೆ ಲಭ್ಯರಾಗುತ್ತಿಲ್ಲ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷರು ಫ್ರಾಂಚೈಸಿ ಮಾಲೀಕರ ಜತೆ ಮಾತುಕತೆ ನಡೆಸಬೇಕು. ರಾಷ್ಟ್ರೀಯ ತಂಡಕ್ಕೆ ಆಡುವ ಆಟಗಾರರು ಪ್ರಮುಖ ಟೂರ್ನಿಗಳಿಗೆ ಲಭ್ಯರಾಗುವಂತೆ ನೋಡಿಕೊಳ್ಳಬೇಕು,” ಎಂದು ಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ | IND vs PAK | ರಿವರ್ಸ್ ಸ್ವೀಪ್ ನಿನ್ನ ಬಲವಲ್ಲ ಎಂದು ಪಂತ್‌ಗೆ ತಿಳಿಹೇಳಿದ ಮಾಜಿ ಕೋಚ್ ರವಿ ಶಾಸ್ತ್ರಿ