ಮುಂಬಯಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 2-1 ಮುನ್ನಡೆ ಗಳಿಸಿರುವ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ (WTC Final) ಅವಕಾಶ ಪಡೆದುಕೊಂಡಿದೆ. ಅಲ್ಲೂ ಭಾರತಕ್ಕೆ ಆಸ್ಟ್ರೇಲಿಯಾ ತಂಡವೇ ಎದುರಾಳಿ. ಜೂನ್ 7ರಿಂದ 11ರವರೆಗೆ ಪಂದ್ಯ ನಡೆಯಲಿದ್ದು, ಇತ್ತಂಡಗಳೂ ಟ್ರೋಫಿ ಗೆಲ್ಲುವುದಕ್ಕೆ ಸಿದ್ಧತೆ ನಡೆಸಿಕೊಂಡಿದೆ. ಬಾರ್ಡರ್ನ- ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡದಲ್ಲಿ ಹೆಚ್ಚು ಸ್ಪಿನ್ನರ್‌ಗಳನ್ನು ಆಡಿಸಲಾಗಿತ್ತು. ಭಾರತದ ಕಂಡೀಷನ್ನಲ್ಲಿ ಅದು ಸರಿಯಾಗಿತ್ತು. ಆದರೆ, ಫೈನಲ್ ಹಣಾಹಣಿ ಇಂಗ್ಲೆಂಡ್ನ ಕೆನಿಂಗ್ಟನ್ ಓವಲ್ನಲ್ಲಿ ನಡೆಯಲಿದೆ. ಅಲ್ಲಿನ ಪಿಚ್ಗಳು ವೇಗಕ್ಕೆ ಸಹಕಾರಿಯಾಗಿವೆ. ಹೀಗಾಗಿ ತವರಿನ ಸರಣಿಯಲ್ಲಿ ಆಡಿಸಿದ ತಂಡವನ್ನು ಕರೆದುಕೊಂಡು ಹೋಗುವುದು ಸಾಧ್ಯವಿಲ್ಲ. ಹೀಗಾಗಿ ಆಡುವು 11ರ ಬಳಗಕ್ಕೆ ಯಾರ್ಯಾರು ಇರಬೇಕು ಎಂಬೆಲ್ಲ ಚರ್ಚೆಗಳು ನಡೆಯುತ್ತಿವೆ. ಈ ವಿಚಾರವಾಗಿ ಮಾತನಾಡಿದ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ, ಕೆ ಎಲ್ ರಾಹುಲ್ಗೆ ತಂಡದಲ್ಲಿ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೆ. ಎಸ್ ಭರತ್ ವಿಕೆಟ್ಕೀಪಿಂಗ್ ಜವಾಬ್ದಾರಿ ನೋಡಿಕೊಂಡಿದ್ದರು. ಅವರು ಬ್ಯಾಟಿಂಗ್ನಲ್ಲಿ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಅದೇ ರೀತಿ ವಿಕೆಟ್ ಕೀಪಿಂಗ್ ವೇಳೆಯೂ ಕೆಲವೊಂದು ತಪ್ಪುಗಳನ್ನು ಮಾಡಿದ್ದರು. ಹೀಗಾಗಿ ಅವರನ್ನು ವಿದೇಶಿ ಪಿಚ್ನಲ್ಲಿ ಆಡಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ ರವಿ ಶಾಸ್ತ್ರಿ. ಏತನ್ಮಧ್ಯೆ, ಯುವ ವಿಕೆಟ್ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೂಡ ತಂಡಕ್ಕೆ ಸೇರುವ ನಿಟ್ಟಿನಲ್ಲಿ ಸ್ಪರ್ಧೆಯಲ್ಲಿದ್ದಾರೆ. ಅವರಿಗೆ ಅನುಭವ ಕಡಿಮೆ. ಹೀಗಾಗಿ ಅವರಿಗಿಂತ ಮಿಗಿಲಾಗಿ ಕೆ. ಎಲ್ ರಾಹುಲ್ಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ ರವಿ ಶಾಸ್ತ್ರಿ.
ಮಾರ್ಚ್ 17ರಂದು ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಪಂದ್ಯದಲ್ಲಿ ಕೆ. ಎಲ್ ರಾಹುಲ್ ವಿಕೆಟ್ಕೀಪಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಅದೇ ರೀತಿ ಬ್ಯಾಟಿಂಗ್ನಲ್ಲೂ ಅಜೇಯ 75 ರನ್ ಬಾರಿಸಿದ್ದರು. ಅವರು ರನ್ಗಳ ನೆರವಿನಿಂದ ಭಾರತ ತಂಡ ಗೆಲುವು ಸಾಧಿಸಿತ್ತು.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ ರವಿ ಶಾಸ್ತ್ರಿ ಚಮತ್ಕಾರ ತೋರಿದ್ದಾರೆ. ಈ ಮೂಲಕ ವಿಕೆಟ್ಕೀಪಿಂಗ್ ಜವಾಬ್ದಾರಿಯನ್ನೂ ಚೆನ್ನಾಗಿ ನಿರ್ವಹಿಸಬಲ್ಲರು ಎಂಬುದನ್ನು ತೋರಿಸಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಅವರಿಗೆ ಅವಕಾಶ ಕೊಡಬೇಕು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ : INDvsAUS : ಕೆ ಎಲ್ ರಾಹುಲ್ ವಿರುದ್ಧ ಮಗದೊಮ್ಮೆ ಟೀಕೆಗಳ ಪ್ರಹಾರ ನಡೆಸಿದ ವೆಂಕಟೇಶ್ ಪ್ರಸಾದ್
ಮೊದಲ ಪಂದ್ಯದ ಯಶಸ್ಸಿನ ಬಳಿಕವೂ ಭಾರತ ತಂಡದಲ್ಲಿ ಕೆ. ಎಲ್ ರಾಹುಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾಗಿದೆ. ಮುಂದಿನ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮ ತಂಡಕ್ಕೆ ಮರಳಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರಾಹುಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು ಎಂಬುದಾಗಿಯೂ ರವಿ ಶಾಸ್ತ್ರಿ ನುಡಿದಿದ್ದಾರೆ.
.ರಾಹುಲ್ ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ ಜವಾಬ್ದಾರಿಯನ್ನೂ ವಹಿಸಿಕೊಂಡರೆ ಭಾರತ ತಂಡದ ಬ್ಯಾಟಿಂಗ್ ಬಲ ಹೆಚ್ಚಲಿದೆ. ಇಂಗ್ಲೆಂಡ್ ಪಿಚ್ ಗಳಲ್ಲಿ ರಾಹುಲ್ ಉತ್ತಮ ದಾಖಲೆ ಹೊಂದಿದ್ದಾರೆ. ಅವರು 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದರಿಂದ ತಂಡದ ಮೊತ್ತ ಹೆಚ್ಚಲು ಸಹಕಾರಿ ಆಗುತ್ತದೆ. ವೇಗದ ಪಿಚ್‌ಗಳಲ್ಲಿ ಹೆಚ್ಚುವರಿ ಸ್ಪಿನ್ನರ್‌ಗಳನ್ನು ಆಡಿಸುವುದು ತೀರಾ ಕಡಿಮೆ. ರಾಹುಲ್ ವೇಗದ ಬೌಲರ್‌ಗಳಿಗೆ ಚೆನ್ನಾಗಿಯೇ ಬ್ಯಾಟ್ ಮಾಡುತ್ತಾರೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ರಾಹುಲ್ ಮತ್ತೆರಡು ಏಕದಿನ ಪಂದ್ಯದಲ್ಲಿ ಆಡಲಿದ್ದು, ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುತ್ತಾರೆ,” ಎಂದು ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.