Site icon Vistara News

Cricket | ಅಪಘಾತದಲ್ಲಿ ಮೃತಪಟ್ಟ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂಪೈರ್‌

Cricket

ಜೊಹಾನ್ಸ್‌ಬರ್ಗ್‌ : ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟ್‌ ಅಂಪೈರ್‌ ರೂಡಿ ಕೊರ್ಜೆನ್‌ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ೭೩ ವರ್ಷದ ಅವರು ವಾರಾಂತ್ಯದ ಗಾಲ್ಫ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ವಾಪಸಾಗುವ ವೇಳೆ ಅಪಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಕೆಪ್‌ಟೌನ್‌ ಹಾಗೂ ಗೆಪ್‌ರಾಹ್‌ ನಗರಗಳ ನಡುವೆ ಅಪಘಾತ ಸಂಭವಿಸಿದ್ದು, ಕರ್ಜೆನ್‌ ಅವರು ತೀವ್ರ ಸ್ವರೂಪದ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

” ನನ್ನ ತಂದೆ ಗಾಲ್ಫ್‌ ಆಡುವುದಕ್ಕಾಗಿ ಗೆಳೆಯರ ಜತೆ ಹೋಗಿದ್ದರು. ಸೋಮವಾರ ಅವರು ವಾಪಸ್‌ ಬರಬೇಕಾಗಿತ್ತು. ಆದರೆ, ಹೆಚ್ಚಿನ ಪಂದ್ಯಗಳನ್ನು ಆಡುವ ನಿರ್ಧಾರದಿಂದ ಅವರು ಇನ್ನೊಂದು ದಿನ ಉಳಿದರು. ಮರು ದಿನ ವಾಪಸಾಗುವಾಗ ಅವಘಡ ಸಂಭವಿಸಿದೆ ಎಂದು ಅವರ ಪುತ್ರ ಸ್ಥಳೀಯ ರೇಡಿಯೊಗೆ ಮಾಹಿತಿ ನೀಡಿದ್ದಾರೆ.

ಹೀಗಾಗಿ ಮಂಗಳವಾರ ಇಂಗ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ತಂಡದ ಕ್ರಿಕೆಟಿಗರು ಕಪ್ಪು ಪಟ್ಟಿ ಧರಿಸಿ ಆಡಿದರು.

ಕೊರ್ಜೆನ್‌ ಅವರು ೧೯೮೧ರಿಂದ ಕ್ರಿಕೆಟ್ ಅಂಪೈರಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ೯೨ರಲ್ಲಿ ಮೊದಲ ಅಂತಾರಾಷ್ಟ್ರೀಯ ಅಂಪೈರಿಂಗ್‌ ಮಾಡಿದ್ದರೆ, ೨೦೧೦ರಲ್ಲಿ ವೃತ್ತಿ ಅಂಪೈರಿಂಗ್‌ನಿಂದ ನಿವೃತ್ತಿ ಹೊಂದಿದ್ದರು.

ಸ್ಲೋ ಫಿಂಗರ್ ಆಫ್‌ ಡೆತ್‌ : ರೂಡಿ ಕೊರ್ಜೆನ್‌ ಅವರನ್ನು ಸ್ಲೋ ಫಿಂಗರ್ ಆಫ್‌ ಡೆತ್‌ ಎಂದೇ ಖ್ಯಾತಿ ಪಡೆದಿದ್ದರು. ಬ್ಯಾಟ್ಸ್‌ಮನ್‌ ಒಬ್ಬರು ಔಟ್‌ ಆಗಿದ್ದಾರೆ ಎಂದು ಗೊತ್ತಾದ ಬಳಿಕವೂ ನಿಧಾನವಾಗಿ ಬೆರಳೆತ್ತುವ ಅವರ ಶೈಲಿಯಿಂದಾಗಿ ಈ ಹೆಸರು ಬಂದಿತ್ತು.

ರೂಡಿ ಕೊರ್ಜೆನ್‌ ಶ್ರೇಷ್ಠ ಕ್ರಿಕೆಟ್ ಅಂಪೈರ್‌ಗಳಲ್ಲಿ ಒಬ್ಬರು. ಕೊರ್ಜೆನ್‌ 108 ಟೆಸ್ಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. 209 ಏಕದಿನ ಮತ್ತು 14 T20 ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಕರ್ಟ್ಜೆನ್ ಅವರು 1992 ರಲ್ಲಿ ಅಂಪೈರಿಂಗ್ ಆರಂಭಿಸಿ 2010ರಲ್ಲಿ ತನ್ನ ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ 2002ರಲ್ಲಿ ಅಂಪೈರ್‌ಗಳ ಎಲೈಟ್‌ ಪ್ಯಾನೆಲ್‌ ಸ್ಥಾಪಿಸಿದಾಗ ಅದರಲ್ಲಿ ಕೊರ್ಜೆನ್‌ ಕೂಡ ಸ್ಥಾನ ಪಡೆದಿದ್ದರು. ಡೇವಿಡ್ ಶೆಫರ್ಡ್ ನಂತರ 150 ಕ್ಕೂ ಹೆಚ್ಚು ODI ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ಕೀರ್ತಿ ಕೊರ್ಜೆನ್‌ಗೆ ಸಲ್ಲುತ್ತದೆ.

ಇದನ್ನೂ ಓದಿ | ASIA CUP | ಏಷ್ಯಾ ಕಪ್‌ಗೆ ಭಾರತ ತಂಡ ಪ್ರಕಟ

Exit mobile version