ನವ ದೆಹಲಿ: ಭಾರತದ ಮಾಜಿ ಕ್ರಿಕೆಟರ್ ಸಲೀಂ ದುರಾನಿ (Salim Durani) ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. 1960ರಿಂದ 1973ರವರೆಗೆ ಒಟ್ಟು 29 ಟೆಸ್ಟ್ ಪಂದ್ಯಾವಳಿಗಳನ್ನು ಆಡಿದ್ದರು. ಎಡಗೈ ಬ್ಯಾಟ್ಸ್ಮ್ಯಾನ್ ಮತ್ತು ಬೌಲರ್ ಆಗಿದ್ದ ಅವರು ಆಲ್ರೌಂಡರ್ ಎನ್ನಿಸಿಕೊಂಡಿದ್ದರು. 75 ವಿಕೆಟ್ಗಳನ್ನು ಪಡೆದಿದ್ದರು. ದುರಾನಿ ಸಿಕ್ಸ್ ಹೊಡೆಯುವ ಶೈಲಿ ವಿಭಿನ್ನವಾಗಿದ್ದು, ಆಕರ್ಷಕ ಎನ್ನಿಸಿತ್ತು.
1934ರ ಡಿಸೆಂಬರ್ 11ರಂದು ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಜನಿಸಿದ್ದ ಸಲೀಂ ದುರಾನಿ, ಈಗ ಗುಜರಾತ್ನ ಜಮ್ನಾಗರ್ದಲ್ಲಿ ತಮ್ಮ ಸಹೋದರ ಜಹಾಂಗೀರ್ ದುರಾನಿಯೊಂದಿಗೆ ವಾಸವಾಗಿದ್ದರು. ಇದೇ ವರ್ಷ ಜನವರಿಯಲ್ಲಿ ಅವರು ಬಿದ್ದು, ತೀವ್ರ ಪೆಟ್ಟು ಮಾಡಿಕೊಂಡಿದ್ದರು. ತೊಡೆಯ ಎಲುಬು ಮುರಿದಿತ್ತು. ಹೀಗಾಗಿ ಒಂದು ಸರ್ಜರಿಗೆ ಒಳಗಾಗಿದ್ದರು.
ಇದನ್ನೂ ಓದಿ: Kevin Pietersen: ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಯಾದ ಮಾಜಿ ಕ್ರಿಕೆಟರ್ ಕೆವಿನ್ ಪೀಟರ್ಸನ್
ಸಲೀಂ ದುರಾನಿ ಅವರು 1960ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು 1960ರಲ್ಲಿ. 1961-62ರಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದಿದ್ದ ಟೆಸ್ಟ್ ಮ್ಯಾಚ್ನಲ್ಲಿ ಹಿರೋ ಆಗಿ ಹೊರಹೊಮ್ಮಿದ್ದರು. ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ 8 ವಿಕೆಟ್ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಾವಳಿಯಲ್ಲಿ 10 ವಿಕೆಟ್ ಪಡೆದಿದ್ದರು. ಭಾರತ ಭರ್ಜರಿಯಾಗಿ ಗೆದ್ದಿತ್ತು. ಅದಾಗಿ ದಶಕಗಳ ನಂತರ ಸ್ಪೇನ್ನಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲೂ ಭಾರತ ಮೊದಲ ಬಾರಿಗೆ ಗೆಲುವು ಸಾಧಿಸುವಲ್ಲಿ ದುರಾನಿ ಪಾತ್ರ ದೊಡ್ಡದಿತ್ತು. ಇವರೊಬ್ಬ ಸ್ಟಾರ್ ಕ್ರಿಕೆಟರ್ ಎನ್ನಿಸಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಸಂತಾಪ
ಸಲೀಂ ದುರಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸಲೀಂ ದುರಾನಿಯವರು ಮೊದಲಿನಿಂದಲೂ ಗುಜರಾತ್ ಜತೆಗೆ ಗಟ್ಟಿಯಾದ ಒಡನಾಟ ಹೊಂದಿದ್ದರು. ಅವರು ಗುಜರಾತ್ ಮತ್ತು ಸೌರಾಷ್ಟ್ರ ಪರ ಆಟವಾಡಿದ್ದರು. ಬಳಿಕ ಗುಜರಾತ್ನಲ್ಲೇ ನೆಲೆಸಿದ್ದರು. ನನಗೂ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಅವರ ಬಹುಮುಖ ವ್ಯಕ್ತಿತ್ವದಿಂದ ನಾನು ಪ್ರಭಾವಿತನಾಗಿದ್ದೇನೆ. ಅವರ ಅಗಲುವಿಕೆ ಕಾಡುತ್ತದೆ. ಸಲೀಂ ದುರಾನಿ ಜೀ ಅವರು ಕ್ರಿಕೆಟ್ನ ದಂತಕಥೆ. ಅವರೇ ಒಬ್ಬ ಇನ್ಸ್ಟಿಟ್ಯೂಶನ್ ಆಗಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ಭಾರತ ಬೆಳೆಯಲು ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಇನ್ನು ಕ್ರಿಕೆಟ್ ಫೀಲ್ಡ್ನಲ್ಲಿ ಇರಬಹುದು, ಆಚೆಗೆ ಇರಬಹುದು ತಮ್ಮದೇ ಆದ ಒಂದು ಸ್ಟೈಲ್ ಹೊಂದಿದ್ದರು. ಅವರ ಸಾವು ನೋವು ತಂದಿದೆ. ಸಲೀಂ ದುರಾನಿ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಟ್ವೀಟ್ ಮಾಡಿದ್ದಾರೆ.