ಮುಂಬೈ: ಕ್ರಿಕೆಟಿಗರು ಎಂದರೆ ಕೋಟ್ಯಂತರ ರೂಪಾಯಿಗಳ ಒಡೆಯರು, ಐಷಾರಾಮಿ ಜೀವನ ನಡೆಸುವವರು, ನಿವೃತ್ತಿ ನಂತವೂ ಕುಳಿತು ತಿನ್ನುವಷ್ಟು ಹಣ ಮಾಡಿರುವವರು ಎಂಬ ಭಾವನೆ ಜನರಲ್ಲಿರುತ್ತದೆ. ಆದರೆ, ನಿವೃತ್ತಿ ನಂತರ ಕೆಲವು ಕ್ರಿಕೆಟಿಗರ ಜೀವನ ದುಸ್ತರವಾಗಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗೆಯೇ, “ಇದರ ಬಗ್ಗೆ ಸಚಿನ್ ತೆಂಡೂಲ್ಕರ್‌ಗೆ ಎಲ್ಲ ಗೊತ್ತಿದೆ. ಆದರೆ, ಅವರಿಂದ ನಾನೂ ಏನನ್ನೂ ನಿರೀಕ್ಷೆ ಮಾಡುವುದಿಲ್ಲ” ಎಂಬ ಬೇಸರದ ಮಾತುಗಳನ್ನಾಡಿದ್ದಾರೆ.
ವಿನೋದ್ ಕಾಂಬ್ಳಿ ಅವರಿಗೆ ಬಿಸಿಸಿಐ ನೀಡುವ ಪಿಂಚಣಿ ಹೊರತಾಗಿ ಯಾವುದೇ ಆದಾಯ ಇಲ್ಲದ ಕಾರಣ ಅವರು ಆರ್ಥಿಕ ಸಂಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ, ಕ್ರಿಕೆಟ್‌ಗೆ ಸಂಬಂಧಿಸಿದ (ಕಾಮೆಂಟರಿ, ಕೋಚ್ ಇತ್ಯಾದಿ) ಯಾವುದೇ ಕೆಲಸಗಳೂ ಸಿಗದ ಕಾರಣ ಬಿಸಿಸಿಐ ನೀಡುವ ೩೦ ಸಾವಿರ ರೂ. ಪಿಂಚಣಿಯೇ ಅವರ ಜೀವನಕ್ಕೆ ಆಧಾರವಾಗಿದೆ. ಹಾಗಾಗಿಯೇ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಕುರಿತು ಹೇಳಿಕೆ ನೀಡಿದ್ದಾರೆ.
ಸಚಿನ್ ಬಗ್ಗೆ ಹೇಳಿದ್ದೇನು?
ಸಚಿನ್ ತೆಂಡೂಲ್ಕರ್ ನನ್ನ ಆತ್ಮೀಯ ಗೆಳೆಯ. ಅವರು ನನಗೆ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಾರೆ. ಬೆನ್ನಹಿಂದೆ ನಿಂತು ನೆರವಾಗಿದ್ದಾರೆ. ಈಗಲೂ ನನ್ನ ಪರಿಸ್ಥಿತಿ ಬಗ್ಗೆ ಅವರಿಗೆ ಎಲ್ಲ ಗೊತ್ತಿದೆ. ಆದರೆ, ಅವರಿಂದ ನಾನು ಏನನ್ನೂ ನಿರೀಕ್ಷಿಸುವುದಿಲ್ಲ. ಇದಕ್ಕೂ ಮೊದಲು ಅವರು ತಮ್ಮ ಅಕಾಡೆಮಿಯಲ್ಲಿ ಕೆಲಸ ನೀಡಿದ್ದರು” ಎಂದು ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಬಾಲ್ಯದ ಗೆಳೆಯರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಿನೋದ್ ಕಾಂಬ್ಳಿ ಅವರು ಯಾವುದೇ ಉದ್ಯೋಗದಲ್ಲಿ ತೊಡಗಿಲ್ಲ. ೨೦೧೯ರಲ್ಲಿ ಟಿ-೨೦ ಮುಂಬೈ ಲೀಗ್ ವೇಳೆ ತಂಡವೊಂದರ ಕೋಚ್ ಆಗಿದ್ದೇ ಅವರ ಕೊನೆಯ ಉದ್ಯೋಗವಾಗಿದೆ. ಕೊರೊನಾ ಬಿಕ್ಕಟ್ಟು, ಕ್ರಿಕೆಟ್ ಲೀಗ್‌ಗಳ ರದ್ದು ಸೇರಿ ಹಲವು ಕಾರಣಗಳಿಂದಾಗಿ ಕಾಂಬ್ಳಿ ಅವರಿಗೆ ಹಣಕಾಸು ಬಿಕ್ಕಟ್ಟು ಎದುರಾಗಿದೆ ಎಂದು ತಿಳಿದುಬಂದಿದೆ.
ಎಂಸಿಎಗೂ ನೆರವು ಕೋರಿಕೆ
ಉದ್ಯೋಗ ನೀಡುವಂತೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೂ (MCA) ವಿನೋದ್ ಕಾಂಬ್ಳಿ ಮನವಿ ಮಾಡಿದ್ದಾರೆ. “ಕ್ರಿಕೆಟಿಗನಾಗಿ ನಿವೃತ್ತಿ ಹೊಂದಿದ ನನಗೆ ಕ್ರಿಕೆಟ್ ಹೊರತಾಗಿ ಬೇರೇನೂ ಗೊತ್ತಿಲ್ಲ. ನನಗೆ ಕುಟುಂಬವಿದೆ, ಅದನ್ನು ಪೊರೆಯಲು ಕೆಲಸ ಬೇಕು. ಈ ಕುರಿತು ಎಂಸಿಎಗೂ ಮನವಿ ಮಾಡಿದ್ದೇನೆ” ಎಂದು ೫೦ ವರ್ಷದ ಕಾಂಬ್ಳಿ ತಿಳಿಸಿದ್ದಾರೆ. ವಿನೋದ್ ಕಾಂಬ್ಳಿ ಅವರು ೧೯೯೧ರಿಂದ ೨೦೦೦ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ಪರ ೧೦೪ ಏಕದಿನ ಹಾಗೂ ೧೭ ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಒಟ್ಟು ೩,೫೬೧ ರನ್ ಗಳಿಸಿದ್ದಾರೆ.
ಇದನ್ನೂ ಓದಿ | ಕ್ರಿಕೆಟ್‌ಗೆ ವಿದಾಯ ಹೇಳಲು ಹೊರಟ ಸೆಹ್ವಾಗ್‌ಗೆ ಧೈರ್ಯ ತುಂಬಿದ್ದು ಸಚಿನ್