ಅಡಿಲೇಡ್ : ಭಾರತ ತಂಡ (Team India) ಟಿ೨೦ ವಿಶ್ವ ಕಪ್‌ನ ಪ್ರಶಸ್ತಿ ರೇಸ್‌ನಿಂದ ನಿರ್ಗಮಿಸುತ್ತಿದ್ದಂತೆ ಒಬ್ಬೊಬ್ಬರು ಒಂದೊಂದು ರೀತಿಯ ವಿಶ್ಲೇಷಣೆ ಶುರು ಮಾಡಿಕೊಂಡಿದ್ದಾರೆ. ಆಟಗಾರರ ಆಯ್ಕೆ ಸರಿ ಇರಲಿಲ್ಲ, ನಾಯಕತ್ವ ಗಟ್ಟಿಯಾಗಿರಲಿಲ್ಲ, ಪ್ಲೇಯಿಂಗ್ ಇಲೆವೆನ್ ದುರ್ಬಲವಾಗಿತ್ತು, ಕೆಲಸಕ್ಕೆ ಬಾರದ ಹಿರಿಯ ಆಟಗಾರರೇ ತುಂಬಿಕೊಂಡಿದ್ದರು ಎಂದೆಲ್ಲ ಟೀಕೆಗಳನ್ನು ಮಾಡಲಾಗುತ್ತಿದೆ. ಈ ಎಲ್ಲ ಟೀಕಾಸ್ತ್ರಗಳ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅವರು ನೀಡಿರುವ ಹೇಳಿಕೆ ಹೆಚ್ಚು ಗಮನ ಸೆಳೆಯುತ್ತಿದೆ. ಏಕೆಂದರೆ, ಅವರ ಪ್ರಕಾರ ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಅತ್ಯಂತ ಕಳಪೆ ತಂಡ.
ಟೀಮ್ ಇಂಡಿಯಾ ಐಸಿಸಿ ಟಿ೨೦ Rank ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹಾಲಿ ವಿಶ್ವ ಕಪ್‌ನ ಗುಂಪು ಎರಡರಲ್ಲಿದ್ದ ಬಳಗ, ಸೂಪರ್-೧೨ ಹಂತದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಟೇಬಲ್ ಟಾಪರ್ ಎನಿಸಿಕೊಂಡು ಸೆಮಿಫೈನಲ್‌ಗೇರಿತ್ತು. ಅದರೆ, ಉಪಾಂತ್ಯದ ಹಣಾಹಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಅದರಲ್ಲೂ ಬೌಲರ್‌ಗಳು ಪೇಲವವಾಗಿ ಕಂಡರು. ಹೀಗಾಗಿ ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್, ಭಾರತ ತಂಡ ಸೀಮಿತ ಓವರ್‌ಗಳ ಟೂರ್ನಿಯಲ್ಲಿ ಯಾವುದೇ ಸಾಧನೆ ಮಾಡುತ್ತಿಲ್ಲ. ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ತಂಡವದು ಎಂದು ಹೇಳಿದ್ದಾರೆ.
೨೦೧೧ರಲ್ಲಿ ಭಾರತ ತಂಡ ಏಕ ದಿನ ವಿಶ್ವ ಕಪ್ ಗೆದ್ದ ಬಳಿಕ ಯಾವುದೇ ಸ್ಮರಣಿಯ ಸಾಧನೆ ಮಾಡಿಲ್ಲ. ಹಾಗಾದರೆ ಇಷ್ಟು ವರ್ಷಗಳ ಕಾಲ ಮಾಡಿದ್ದೇನು? ವಿಶ್ವದ ಎಲ್ಲ ಆಟಗಾರರು ಭಾರತಕ್ಕೆ ಹೋಗಿ ಐಪಿಎಲ್ ಆಡುತ್ತಾರೆ ಹಾಗೂ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುತ್ತಿದ್ದಾರೆ. ಆದರೆ ಭಾರತ ತಂಡದ ಆಟಗಾರರು ಮಾಡುತ್ತಿರುವುದೇನು,” ಎಂದು ವಾನ್ ಪ್ರಶ್ನಿಸಿದ್ದಾರೆ.
“ಭಾರತ ತಂಡದಲ್ಲಿ ಉತ್ತಮ ಆಟಗಾರರು ಇದ್ದಾರೆ. ಆದರೆ, ಅವರ ಕೊಡುಗೆಗಳು ಯಾವುವು? ಎದುರಾಳಿ ತಂಡದ ಬೌಲರ್‌ಗಳಿಗೆ ಅವರು ತಮ್ಮ ವಿಕೆಟ್ ಒಪ್ಪಿಸುತ್ತಿರುವುದು ಯಾಕೆ? ಭಾರತ ತಂಡವನ್ನು ಟೀಕೆ ಮಾಡುವುದಕ್ಕೆ ಯಾರೂ ಮುಂದಾಗುತ್ತಿಲ್ಲ. ಯಾಕೆಂದರೆ ಸಾಮಾಜಿಕ ಜಾಲತಾಣಗಳ ಮೂಲಕ ವಿರೋಧ ವ್ಯಕ್ತವಾಗುತ್ತವೆ ಹಾಗೂ ಬಿಸಿಸಿಐನಲ್ಲಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ. ಆದರೆ, ಭಾರತ ತಂಡ ಉತ್ತಮವಾಗಿಲ್ಲ ಎಂಬುದನ್ನು ಹೇಳುವುದಕ್ಕೆ ಇದು ಸೂಕ್ತ ಸಮಯ. ಅಂತೆಯೇ ಆ ತಂಡದ ಬೌಲರ್‌ಗಳು ಕೂಡ ಸಮರ್ಥರಲ್ಲ,” ಎಂದು ವಾನ್ ಹೇಳಿದ್ದಾರೆ.
ಇದನ್ನೂ ಓದಿ | Boycott IPL | ವಿಶ್ವ ಕಪ್ ಸೆಮಿ ಫೈನಲ್ ಸೋಲಿನ ಬಳಿಕ ಬಾಯ್ಕಾಟ್ ಐಪಿಎಲ್ ಟ್ರೆಂಡಿಂಗ್ ಜೋರು