ನ್ಯೂಯಾರ್ಕ್: ಅಮೇರಿಕದ ಖ್ಯಾತ ಮಾಜಿ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್(Mike Tyson) ಮೇಲೆ ಮಹಿಳೆಯೊಬ್ಬರು ಅತ್ಯಾಚಾರದ ದೂರು ದಾಖಲಿಸಿದ್ದಾರೆ.
ಮೈಕ್ ಟೈಸನ್ ಅವರು ತನ್ನ ಮೇಲೆ 1990ರಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ 40 ಕೋಟಿ ರೂ. ಪರಿಹಾರವನ್ನೂ ಕೊಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಅಲ್ಬಾನಿಯ ನೈಟ್ ಕ್ಲಬ್‌ನಲ್ಲಿ ಟೈಸನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ತನ್ನ ಮೇಲೆ ಅತ್ಯಾಚಾರವೆಸಗಿದ್ದರು. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ನಾನು ಅಪಾರವಾಗಿ ಘಾಸಿಗೊಂಡಿದ್ದೇನೆ” ಎಂದು ಅವರೂ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಮೆರಿಕದ ಅಡಲ್ಟ್ ಸರ್ವೈವರ್ಸ್ ಕಾಯಿದೆಯಡಿಯಲ್ಲಿ ಮೈಕ್ ಟೈಸನ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
“ಕಾರ್‌ನಲ್ಲಿ ಕುಳಿತಿದ್ದಾಗಲೇ ಟೈಸನ್ ಅವರು ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದರು. ಆಗ ನಾನು ವಿರೋಧಿಸಿದೆ. ಎಚ್ಚರಿಕೆಯನ್ನೂ ನೀಡಿದೆ. ಆದರೂ ಅವರು ನನ್ನ ಮೇಲೆ ಬಲವಂತವಾಗಿ ಹಲ್ಲೆ ನಡೆಸಿ ಅತ್ಯಾಚಾರವೆಸಗಿದರು” ಎಂದು ಮಹಿಳೆ ದೂರಿದ್ದಾರೆ. ಈಗಾಗಲೇ ಟೈಸನ್ 1992ರಲ್ಲಿ ವಾಷಿಂಗ್ಟ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಇದೀಗ ಮತ್ತೊಂದು ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಅವರು ಅತ್ಯಾಚಾರವೆಸಗಿದ್ದು ಸಾಬೀತಾದರೆ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | Wrestlers Protest | ಲೈಂಗಿಕ ಕಿರುಕುಳ ಪ್ರಕರಣ; ಕುಸ್ತಿಪಟುಗಳ ಹೋರಾಟ ಅಂತ್ಯ