Site icon Vistara News

ಫಿಕ್ಸಿಂಗ್ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದ ಅಜರುದ್ದೀನ್​ ಮೇಲೆ ಈಗ ಅವ್ಯವಹಾರ ಆರೋಪ!

Mohammad Azharuddin

ಹೈದರಾಬಾದ್​: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಬಾರಿ 3.85 ಕೋಟಿ ರೂ.ಗಳ ಹಣವನ್ನು ದುರುಪಯೋಗಪಡಿಸಿದ ಆರೋಪದ ಮೇಲೆ ಅಜರುದ್ದೀನ್ ಸೇರಿದಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್ಸಿಎ) ಮಾಜಿ ಪದಾಧಿಕಾರಿಗಳ ವಿರುದ್ಧ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಮೂಲಕ ಹಿಂದೆ ಕ್ರಿಕೆಟ್​ ಮೈದಾನದಲ್ಲಿ ಮೋಸದಾಟ ಆಡಿ ನಿಷೇಧಕ್ಕೆ ಒಳಗಾಗಿದ್ದ ಅಜರುದ್ದೀನ್ ಅವರು ಆಡಳಿತಾತ್ಮ ಕಾರ್ಯದಲ್ಲಿ ಮೋಸ ಮಾಡಿದಂತಾಗಿದೆ.

ಉಪ್ಪಲ್​​ನ ಆರ್​​ಜಿಐಸಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಚೆಂಡು, ಅಗ್ನಿ ಸುರಕ್ಷತಾ ಉಪಕರಣಗಳು, ಜಿಮ್ ಉಪಕರಣಗಳು ಮತ್ತು ಬಕೆಟ್ ಕುರ್ಚಿಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡಲಾಗಿದೆ ಎಂದು ಹೇಳಿ ಹಣ ದುರುಪಯೋಗ ಮಾಡಲಾಗಿದೆ. . ಆ ಸಮಯದಲ್ಲಿ ಅಜರುದ್ದೀನ್ ಸಂಸ್ಥೆಯ ಅಧ್ಯಕ್ಷರಾಗಿದ್ದರೆ, ಆರ್ ವಿಜಯ್ ಆನಂದ್ ಕಾರ್ಯದರ್ಶಿ ಮತ್ತು ಸುರೇಂದರ್ ಅಗರ್ವಾಲ್ ಖಜಾಂಚಿಯಾಗಿದ್ದರು.

ಐಪಿಸಿ ಸೆಕ್ಷನ್ 406, 409, 420, 465, 467, 471 ಮತ್ತು 120-ಬಿ ಅಡಿಯಲ್ಲಿ ವಂಚನೆ, ಫೋರ್ಜರಿ ಮತ್ತು ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ. ಏತನ್ಮಧ್ಯೆ, ಎಚ್ಸಿಎ ಸಿಇಒ ಸುನೀಲ್ ಕಾಂಟೆ ಬೋಸ್ ಅವರಿಂದ ದೂರುಗಳು ಬಂದಿವೆ. “ಮಧ್ಯಂತರ ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿಯ ಆಧಾರದ ಮೇಲೆ, ಮೂರನೇ ಪಕ್ಷದ ಮಾರಾಟಗಾರರೊಂದಿಗೆ ಎಚ್​​ಪಿಸಿಎ ಪರವಾಗಿ ಮಾಡಿಕೊಂಡ ಕೆಲವು ವಹಿವಾಟುಗಳು ಸುಳ್ಳು. ಅದೇ ರಿತಿ ವ್ಯವಹಾರ ಸಂಸ್ಥೆಯ ಹಿತಾಸಕ್ತಿಗೆ ಹಾನಿ ಮಾಡಿರುವುದು ಸ್ಪಷ್ಟವಾಗಿದೆ” ಎಂದು ದೂರುದಾರರು ಹೇಳಿದ್ದಾರೆ.

ಎಚ್​​ಸಿಎ ಸಿಇಒ ಮಾಡಿರುವ ಆರೋಪಗಳು ಸುಳ್ಳು ಮತ್ತು ರಾಜಕೀಯ ಪ್ರೇರಿತವಾಗಿವೆ ಎಂದು ಅಜರ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಈ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Inside Story : ಕಿಚ್ಚ ಸುದೀಪ್ ಅವರನ್ನ ರಾಜಕೀಯಕ್ಕೆ ಎಳೆ ತಂದರೇ ಅಮಿತ್ ಶಾ ಮಗ ಜಯ್ ಶಾ?

ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಲಾಗಿತ್ತು

ಈ ಹಿಂದೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್ಸಿಎ) ಚುನಾವಣೆಯಲ್ಲಿ ಸ್ಪರ್ಧಿಸದಂತೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ನಿಷೇಧಿಸಲಾಗಿತ್ತು. ನ್ಯಾಯಮೂರ್ತಿ ಲಾವು ನಾಗೇಶ್ವರ ರಾವ್ ಸಮಿತಿಯು ಅಕ್ಟೋಬರ್ 20 ರಂದು ಎಚ್​​ಸಿಎ ಚುನಾವಣೆಗಳನ್ನು ನಡೆಸಿತ್ತು.. ಮಾಜಿ ಕ್ರಿಕೆಟಿಗ ಅಜರುದ್ದೀನ್ ಅವರು ಎಚ್​​ಸಿಎ ಅಧ್ಯಕ್ಷರಾಗಿದ್ದ ಸಮಯದಲ್ಲಿ ಡೆಕ್ಕನ್ ಬ್ಲೂಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಅಜರುದ್ದೀನ್ ಅವರನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಎಚ್​​ಸಿಎ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರಿಂದ, ಅಜರುದ್ದೀನ್ ಅವರನ್ನು ಸಮಿತಿ ಅನರ್ಹಗೊಳಿಸಿತ್ತು.

ಎಚ್ಸಿಎ ಚುನಾವಣಾ ಅಧಿಸೂಚನೆಯನ್ನು ಸೆಪ್ಟೆಂಬರ್ 30 ರಂದು ವಿಎಸ್ ಸಂಪತ್ ಬಿಡುಗಡೆ ಮಾಡಿದ್ದರು. ಇದಲ್ಲದೆ, ಎಚ್​​ಸಿಎ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಖಜಾಂಚಿ ಮತ್ತು ಕಾರ್ಯಕಾರಿ ಸಮಿತಿ ಹುದ್ದೆಗಳಂತಹ ಹಲವಾರು ಹುದ್ದೆಗಳಿಗೆ ಚುನಾವಣೆ ನಡೆದಿದೆ.

Exit mobile version