Site icon Vistara News

ಪಾಕ್​ ಮಣಿಸಿದ ಆಫ್ಘನ್​ ತಂಡಕ್ಕೆ ಭಾರತದ ಮಾಜಿ ಕ್ರಿಕೆಟಿಗರಿಂದ ಪ್ರಶಂಸೆಯ ಸುರಿಮಳೆ

ಚೆನ್ನೈ: ಭಾರತ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿದ ಅಫಘಾನಿಸ್ತಾನ(Pakistan vs Afghanistan) ತಂಡಕ್ಕೆ ಭಾರತದ ಮಾಜಿ ಕ್ರಿಕೆಟ್​ ದಿಗ್ಗಜರಾದ ಸಚಿನ್​ ತೆಂಡೂಲ್ಕರ್, ವೀರೇಂದ್ರ ಸೆಹವಾಗ್​, ಹರ್ಭಜನ್​ ಸಿಂಗ್​, ವಾಸಿಂ ಜಾಫರ್​, ರವಿಶಾಸ್ತ್ರಿ ಸೇರಿ ಅನೇಕರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

ಚೆನ್ನೈನ ಚೆಪಾಕ್ ಸ್ಟೇಡಿಯಮ್​ನಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್​ ಮಾಡಲು ಮುಂದಾಯಿತು. ಅಂತೆಯೇ ಆಫ್ಘನ್​ ಬೌಲರ್​ಗಳೆದುರು ವೈಫಲ್ಯ ಕಂಡು ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗೆ 282 ರನ್​ ಬಾರಿಸಿತು. ಪ್ರತಿಯಾಗಿ ಆಡಿದ ಅಪಘಾನಿಸ್ತಾನ ತಂಡ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್​ ನಷ್ಟಕ್ಕೆ 286 ರನ್ ಬಾರಿಸಿ ಐತಿಹಾಸಿಕ ಎಂಟು ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಏಕ ದಿನ ಕ್ರಿಕೆಟ್​ ಮಾದರಿಯಲ್ಲಿ ಪಾಕ್ ವಿರುದ್ಧ ಅಫಘಾನಿಸ್ತಾನ ತಂಡ ದಾಖಲಿಸಿದ ಮೊದಲ ವಿಜಯವಾಗಿದೆ.

ಸಚಿನ್​ ಮೆಚ್ಚುಗೆ​

ಸಚಿನ್​ ತೆಂಡೂಲ್ಕರ್​ ಅವರು ಅಫಘಾನಿಸ್ತಾನ ತಂಡಕ್ಕೆ ಪ್ರಶಂಸೆ ಸೂಚಿಸಿದ್ದಾರೆ. “ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಆಟದಲ್ಲಿ ತೋರುತ್ತಿರುವ ಅವರ ಶಿಸ್ತು, ಮನೋಧರ್ಮ ಮತ್ತು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿರುವ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ತೋರಿಸುತ್ತಿದೆ. ಬಹುಶಃ ಇದು ಶ್ರೀ ಅಜಯ್ ಜಡೇಜಾ ಅವರ ಪ್ರಭಾವದ ಕಾರಣದಿಂದಾಗಿರಬಹುದು. ಅಸಾಧಾರಣ ಪ್ರದರ್ಶನದೊಂದಿಗೆ ಬಲಿಷ್ಠ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳ ಮೇಲೆ ಸವಾರಿ ಮಾಡಿದ ನಿಮ್ಮ ಈ ಸಾಹಸ ಹೀಗೆಯೇ ಮುಂದುವರಿಯಲಿ. ಇನ್ನೂ ಕೂಡ ಅಚ್ಚರಿಯ ಫಲಿತಾಂಶವನ್ನು ನಿಮ್ಮಿಂದ ನಿರೀಕ್ಷೆ ಮಾಡಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಅಜಯ್ ಜಡೇಜಾ ಅವರು ಅಫಘಾನಿಸ್ತಾನ ತಂಡದ ಮೆಂಟರ್ ಹಾಗೂ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವಿಶ್ವಕಪ್‌ಗೂ ಮುನ್ನವೇ ಅವರು ತಂಡವನ್ನು ಸೇರಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಆಫ್ಘನ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಮೊದಲು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಇದೀಗ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದೆ. ಮುಂದಿನ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ವಿಶ್ವಾಸದಲ್ಲಿದೆ.

ರವಿಶಾಸ್ತ್ರಿ ಟ್ವೀಟ್​

“ನೀವು ನಿಜಕ್ಕೂ ಗ್ರೇಟ್​, ವಿಶ್ವಕಪ್ ವಿಜೇತರನ್ನು ಸೋಲಿಸಿದ ನಿಮ್ಮ ಪರಾಕ್ರಮ ಮೆಚ್ಚಲೇ ಬೇಕು. ಇದೇ ಪದರ್ಶನವನ್ನು ತೋರುವ ಮೂಲಕ ಸೆಮಿಫೈನಲ್​ಗೆ ಪ್ರವೇಶ ಪಡೆಯಿರಿ. ನಿಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಇದು ಉತ್ತಮ ವೇದಿಕೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ನಿತ್ಯ 8 ಕೆಜಿ ಮಟನ್​ ತಿನ್ನೋದು ಬಿಟ್ಟು ದೇಶದ ಬಗ್ಗೆ ಚಿಂತಿಸಿ; ಪಾಕ್​ ಮಾಜಿ ಆಟಗಾರನ ಆಕ್ರೋಶ

ಭಾರತೀಯರಿಗೆ ಧನ್ಯವಾದ ತಿಳಿಸಿದ ಆಘ್ಘನ್​ ಆಟಗಾರರು

ಚೆನ್ನೈಯ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿ ತಂಡಕ್ಕೆ ಬೆಂಬಲ ಸೂಚಿಸಿದ ಭಾರತೀಯರಿಗೆ ಆಫ್ಘನ್​ ಆಟಗಾರರು ಪಂದ್ಯದ ಬಳಿಕ ಧನ್ಯವಾದ ಸಲ್ಲಿದ್ದಾರೆ. ತಂಡದ ಎಲ್ಲ ಆಟಗಾರರು ಚೆಪಾಕ್​ ಮೈದಾನದಲ್ಲಿ ಚಪ್ಪಾಳೆ ತಟ್ಟುತ್ತಾ ಒಂದು ಸುತ್ತು ತಿರುಗಿ ತಮಗೆ ಬೆಂಬಲಿಸಿದ ಎಲ್ಲ ಭಾರತೀಯ ಅಭಿಮಾಗಳಿಗೆ ತಲೆಬಾಗಿ ವಂದಿಸಿದ್ದಾರೆ.

Exit mobile version