ಲಾಹೋರ್ : ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ (ASIA CUP- 2022) ಹಣಾಹಣಿಗೆ ಇನ್ನು ೯ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಎರಡೂ ದೇಶಗಳ ಹಿರಿಯ, ಕಿರಿಯ ಆಟಗಾರರ ನಡುವಿನ ಪಂಥಾಹ್ವಾನ ಶುರುವಾಗಿದೆ. ನಾವೇ ಗೆಲ್ಲುವುದು, ನಮಗೇ ಅನುಕೂಲ ಎಂದು ಎರಡೂ ದೇಶಗಳ ಮಂದಿ ನುಡಿಯುತ್ತಿದ್ದಾರೆ. ಏತನ್ಮಧ್ಯೆ ಪಾಕಿಸ್ತಾನ ತಂಡದ ಮಾಜಿ ನಾಯಕ ಸರ್ಫರಾಜ್ ಅಹಮದ್, ಈ ಬಾರಿಯೂ ಗೆಲುವು ನಮ್ಮದೇ ಎಂದು ಅಭಿಪ್ರಾಯಪಟ್ಟಿದ್ದಾರೆ.
೨೦೨೧ರಲ್ಲಿ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಏಷ್ಯಾ ಕಪ್ ಪಂದ್ಯ ನಡೆಯಲಿರುವ ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ಪರಸ್ಪರ ಎದುರಾಗಿತ್ತು. ಆ ಹಣಾಹಣಿಯಲ್ಲಿ ಭಾರತ ತಂಡ ೧೦ ವಿಕೆಟ್‌ಗಳಿಂದ ಹೀನಾಯವಾಗಿ ಸೋಲು ಕಂಡಿತ್ತು. ಇದೇ ಹಿನ್ನೆಲೆಯನ್ನು ಇಟ್ಟುಕೊಂಡು ಮಾತನಾಡಿದ ಸರ್ಫರಾಜ್ ಅಹಮದ್, ದುಬೈ ಸ್ಟೇಡಿಯಮ್‌ನ ಪರಿಸ್ಥಿತಿಯ ಬಗ್ಗೆ ಪಾಕಿಸ್ತಾನ ತಂಡಕ್ಕೆ ಅರಿವಿದೆ. ಅಲ್ಲಿ ಹೂಡಬೇಕಾದ ರಣತಂತ್ರ ಯಾವುದೆಲ್ಲ ಎಂಬುದೂ ಗೊತ್ತಿದೆ. ಹೀಗಾಗಿ ಕಳೆದ ಬಾರಿಯ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಹೇಳಿದ್ದಾರೆ.
ದುಬೈ ಸ್ಟೇಡಿಯಮ್‌ನಲ್ಲಿ ನಾವು ಪಾಕಿಸ್ತಾನ ಪ್ರೀಮಿಯರ್ ಲೀಗ್ ಆಡಿದ್ದೇವೆ. ಹಲವಾರು ಅಂತಾರಾಷ್ಟ್ರೀಯ ಏಕದಿನ ಹಾಗೂ ಟಿ೨೦ ಪಂದ್ಯಗಳಲ್ಲಿ ಪಾಲ್ಗೊಂಡಿದ್ದೇವೆ. ಭಾರತ ತಂಡದ ಆಟಗಾರರು ಅಲ್ಲಿ ಐಪಿಎಲ್ ಆಡಿರಬಹುದು. ಆದರೆ, ಒಟ್ಟಾರೆ ಅನುಭವ ಪಾಕಿಸ್ತಾನಕ್ಕೆ ಹೆಚ್ಚಿದೆ. ಹೀಗಾಗಿ ಈ ಬಾರಿಯೂ ಪಾಕಿಸ್ತಾನವೇ ಗೆಲ್ಲಲಿದೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ ೨೭ರಂದು ಏಷ್ಯಾ ಕಪ್ ಆರಂಭಗೊಳ್ಳಲಿದ್ದು, ೨೮ರಂದು ಭಾರತ ಹಾಗೂ ಪಾಕಿಸ್ತಾನ ತಂಡ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯ ಟೂರ್ನಿಯ ಹೈವೋಲ್ಟೇಜ್ ಪಂದ್ಯವಾಗಿದೆ. ಹೀಗಾಗಿ ರಾಜಕೀಯ ವೈರಿಗಳಾಗಿರುವ ಎರಡು ದೇಶಗಳ ತಂಡಗಳು ಗೆಲುವಿಗಾಗಿ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿವೆ.
ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ರೋಹಿತ್
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಕಳೆದ ವರ್ಷ ಟಿ೨೦ ವಿಶ್ವ ಕಪ್‌ನ ಪಂದ್ಯದಲ್ಲಿ ನಾವು ಪಾಕಿಸ್ತಾನ ವಿರುದ್ಧ ಸೋತಿದ್ದೇವೆ. ಆದರೆ, ಈ ಬಾರಿ ನಮ್ಮ ತಂಡ ಭಿನ್ನ ಸಾಮರ್ಥ್ಯ ಹೊಂದಿದ್ದು, ಮುಂಬರುವ ಏಷ್ಯಾ ಕಪ್‌ನಲ್ಲಿ ಪಾಕ್ ತಂಡವನ್ನು ಬಗ್ಗು ಬಡಿಯುವುದು ಖಾತರಿ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ವಿಶ್ವಾಸ ವ್ಯಕ್ತಪಡಿಸಿದ್ದರು.
ಹಿಂದಿನ ಬಾರಿ ಫಲಿತಾಂಶ ನಮಗೆ ಪೂರಕವಾಗಿ ಇರಲಿಲ್ಲ. ಆದರೆ, ಈ ಬಾರಿ ನಮ್ಮ ತಂಡದ ಸಂಯೋಜನೆ ಉತ್ತಮವಾಗಿದೆ. ಎಂಥ ಪರಿಸ್ಥಿತಿಯಲ್ಲೂ ಆಡುವ ಶಕ್ತಿ ಬೆಳೆಸಿಕೊಂಡಿದೆ. ಅಂತೆಯೆ ಮರುಭೂಮಿ ನಾಡಿನ ತಾಪಮಾನಕ್ಕೆ ಪೂರಕವಾಗಿ ಅಡುವುದಕ್ಕೆ ಸಿದ್ಧವಾಗಿದ್ದೇವೆ ಎಂದು ಅವರು ಹೇಳಿದ್ದಾರೆ.