Site icon Vistara News

Ram Mandir: ರಾಮಮಂದಿರ ಉದ್ಘಾಟನೆ; ಅಭಿನಂದನೆ ಸಲ್ಲಿಸಿದ ಪಾಕಿಸ್ತಾನ ಕ್ರಿಕೆಟಿಗ

Danish Kaneria

ಕರಾಚಿ: ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾದ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದ್ದು, ದೇಶಾದ್ಯಂತ ಸಂತಸ ಮನೆ ಮಾಡಿದೆ. ಪಾಕಿಸ್ತಾನದಲ್ಲಿಯೂ ರಾಮಮಂದಿರ ಉದ್ಘಾಟನೆಯ ಸಂಭ್ರಮ ಕಂಡುಬಂದಿದೆ. ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ದಾನಿಶ್ ಕನೇರಿಯಾ (Danish Kaneria) ಅಭಿನಂದನೆ ಸಲ್ಲಿಸಿದ್ದಾರೆ.

ದಾನಿಶ್ ಕನೇರಿಯಾ ತಮ್ಮ ಅಧಿಕೃತ ಟ್ವೀಟರ್​ ಎಕ್ಸ್​​ ಖಾತೆಯಲ್ಲಿ ರಾಮಮಂದಿರ ಉದ್ಘಾಟನೆಯ ಫೋಟೊಗಳನ್ನು ಹಂಚಿಕೊಂಡು, “ಭಗವಾನ್ ರಾಮ್ ಆಗಮಿಸಿದ್ದಾರೆ. ಜೈಶ್ರೀರಾಮ್. ಎಲ್ಲ ಹಿಂದೂಗಳಿಗೂ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ.

ಕನೇರಿಯಾ 2 ದಿನಗಳ ಹಿಂದಷ್ಟೇ ರಾಮಲಲ್ಲಾನ ವಿಗ್ರಹದ ಫೋಟೊವನ್ನು ಹಂಚಿಕೊಂಡು ‘ನನ್ನ ರಾಮ ಈಗ ವಿರಾಜಮಾನ” ಎಂದು ಬರೆದುಕೊಂಡಿದ್ದರು. ಇದಕ್ಕೂ ಮುನ್ನ ಭಗವಾಧ್ಬಜ ಹಿಡಿದು ಸಂಭ್ರಮಿಸಿದ್ದರು. ಈ ಎಲ್ಲ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಕನೇರಿಯಾ ಪಾಕಿಸ್ತಾನದಲ್ಲಿರುವ ಹಿಂದೂ ಧರ್ಮೀಯ ಕ್ರಿಕೆಟರ್ ಆಗಿದ್ದಾರೆ.

ಕರಾಚಿ ಮೂಲದ ದಾನಿಶ್ ಕನೇರಿಯಾ 2000ರಿಂದ 2010ರವರೆಗೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಸ್ಪಿನ್ ಬೌಲರ್ ಆಗಿ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ, ಕನೇರಿಯಾ ಇಸ್ಲಾಂ ದೇಶದಲ್ಲಿ ತಾವೆದುರಿಸಿದ ತಾರತಮ್ಯವನ್ನು ಇತ್ತೀಚಿಗೆ ಹೇಳಿಕೊಂಡಿದ್ದರು. ಸಂದರ್ಶನವೊಂದರಲ್ಲಿ, ಇಸ್ಲಾಂಗೆ ಮತಾಂತರಗೊಳ್ಳಲು ಕೆಲವು ಸಹ ಆಟಗಾರರಿಂದ ಒತ್ತಾಯ ಬಂದಿತ್ತು ಎಂದು ದೂರಿದ್ದರು. ಕ್ರಿಕೆಟ್​ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಎಂಬ ಹೆಗ್ಗಳಿಕೆಗೆ ಕನೇರಿಯಾ ಅವರದ್ದು . ಟೆಸ್ಟ್ ಕ್ರಿಕೆಟ್​ನಲ್ಲಿ 250 ಕ್ಕೂ ಹೆಚ್ಚು ವಿಕೆಟ್​ಗಳ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ Ram Mandir: ರಾಮಮಂದಿರ ಲೋಕಾರ್ಪಣೆ ಕಂಡು ಭಾವನಾತ್ಮಕ ಸಂದೇಶ ಹಂಚಿಕೊಂಡ ಕ್ರಿಕೆಟಿಗ ಸೆಹವಾಗ್​

ಸೋಮವಾರ ಉದ್ಘಾಟನೆಯಾಗಿರುವ ರಾಮ ಮಂದಿರವು ಜ.23, ಮಂಗಳವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ(Opens To Public). ಜನರು ರಾಮ ಲಲ್ಲಾನ (Ram Lalla)ದರ್ಶನವನ್ನು ಪಡೆದುಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಅಯೋಧ್ಯೆಯ ರಾಮ ಮಂದಿರವು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಭಗವಾನ್ ರಾಮನ ಜನ್ಮಸ್ಥಳವೆಂದು ನಂಬಲಾಗಿದೆ. ಇದನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನಿರ್ವಹಿಸುತ್ತದೆ.

ಪಾಸ್ ಪಡೆಯುವುದು ಹೇಗೆ?


ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಆರತಿ ಅಥವಾ ದರ್ಶನಕ್ಕಾಗಿ ಪಾಸ್‌ಗಳನ್ನು ಪಡೆಯಬಹುದು. ಆನ್‌ಲೈನ್ ಬುಕ್ ಮಾಡಲು, ಅಯೋಧ್ಯಾ ರಾಮ ಮಂದಿರ ಜಾಲತಾಣಕ್ಕೆ ಲಾಗಿನ್ ಆಗಬೇಕು. ಇದಕ್ಕಾಗಿ ನಿಮ್ಮ ಮೊಬೈಲ್ ನಂಬರ್ ಬಳಸಬೇಕಾಗುತ್ತದೆ. ನಿಮ್ಮ ಮೊಬೈಲ್‌ಗೆ ಕಳುಹಿಸಲಾಗುವ ಒಟಿಪಿ ಮೂಲಕ ನಿಮ್ಮ ಗುರುತು ದೃಢೀಕರಿಸಬೇಕಾಗುತ್ತದೆ. ಬಳಿಕ ಮೈ ಪ್ರೊಫೈಲ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಬೇಕಾದ ಸಮಯವನ್ನು ಆಯ್ಕೆ ಮಾಡಬೇಕು ಮತ್ತು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ. ಹೀಗೆ ನಿಮ್ಮ ಪಾಸ್ ಅನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದು.

Exit mobile version