ಇಸ್ಲಾಮಾಬಾದ್: ಟೀಮ್ ಇಂಡಿಯಾ (Team India) ವಿಶ್ವ ಕಪ್‌ನಿಂದ ಹೊರಕ್ಕೆ ಹೋಗುತ್ತಿದ್ದಂತೆ ಹಿರಿಯ- ಕಿರಿಯ ಕ್ರಿಕೆಟಿಗರು ಬಾಯಿಗೆ ಬಂದಂತೆ ಮಾತನಾಡಲು ಆರಂಭಿಸಿದ್ದಾರೆ. ಅದರಲ್ಲೂ ಪಾಕಿಸ್ತಾನ ಕೆಲವು ಕ್ರಿಕೆಟಿಗರು ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಸೋಲನ್ನು ಕುಣಿದು ಕುಪ್ಪಳಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಅಂತೆಯೇ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಟೀಮ್ ಇಂಡಿಯಾದ ಪ್ರದರ್ಶನವನ್ನು ಮುಂದಿಟ್ಟುಕೊಂಡು ಭಾರೀ ವಿಶ್ಲೇಷಣೆ ಮಾಡಿದ್ದು, ಸೆಮಿ ಫೈನಲ್‌ನಲ್ಲಿ ಟೀಮ್ ಇಂಡಿಯಾದ ನಿಜ ಬಣ್ಣ ಬಯಲಾಯಿತು ಎಂಬುದಾಗಿ ಹೇಳಿದ್ದಾರೆ.
“ಭಾರತ ತಂಡ ಸೆಮಿಫೈನಲ್‌ನಲ್ಲಿ ನೀಡಿರುವ ಪ್ರದರ್ಶನ ಇದುವರೆಗಿನ ಅತ್ಯಂತ ಹೀನಾಯ ಆಟವಾಗಿದೆ. ಯಾವುದೇ ತಂಡ ಈ ರೀತಿ ಆಡಿಲ್ಲ. ಇಷ್ಟೊಂದು ದುರ್ಬಲವಾಗಿರುವ ಭಾರತ ತಂಡ ಫೈನಲ್‌ಗೇರಲು ಯಾವುದೇ ಅರ್ಹತೆ ಹೊಂದಿಲ್ಲ. ಪಾಕಿಸ್ತಾನದಂಥ ಬಲಿಷ್ಠ ಬಳಗವನ್ನು ಎದುರಿಸುವ ಶಕ್ತಿಯೂ ಅವರಿಗೆ ಇರಲಿಲ್ಲ,” ಎಂಬುದಾಗಿ ಅಖ್ತರ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
“ಟೀಮ್ ಇಂಡಿಯಾದಲ್ಲಿ ಎಕ್ಸ್‌ಪ್ರೆಸ್ ವೇಗದ ಬೌಲರ್‌ಗಳು ಇರಲಿಲ್ಲ. ಪರಿಣಾಮಕಾರಿ ಸ್ಪಿನ್ ಬೌಲರ್‌ಗಳು ಕಂಡಿಲ್ಲ. ಅಷ್ಟೂ ಗೊಂದಲಕಾರಿಯಾಗಿರುವ ಆಯ್ಕೆ ಮಾಡಲಾಗಿತ್ತು. ಅವರ ಮನಸ್ಥಿತಿಯೇ ಆಸ್ಟ್ತೇಲಿಯಾದ ಪರಿಸ್ಥಿತಿಗೆ ಪೂರಕವಾಗಿ ಇರಲಿಲ್ಲ,” ಎಂದು ಪಾಕ್‌ನ ಮಾಜಿ ವೇಗದ ಬೌಲರ್ ನುಡಿದಿದ್ದಾರೆ.
“ಸೆಮಿ ಫೈನಲ್‌ಗೇರುವುದು ದೊಡ್ಡ ವಿಷಯವೇನೂ ಅಲ್ಲ. ಗುಂಪು ಹಂತದಲ್ಲಿ ಒಟ್ಟು ಇದ್ದಿದ್ದೇ ನಾಲ್ಕು ತಂಡಗಳು. ಅದರಲ್ಲಿ ಜಿಂಬಾಬ್ವೆ ಹಾಗೂ ನೆದರ್ಲೆಂಡ್ಸ್ ದುರ್ಬಲ ತಂಡಗಳು. ಈ ತಂಡಗಳ ವಿರುದ್ಧ ಗೆದ್ದು ಸೆಮೀಸ್‌ಗೆ ಏರುವುದು ದೊಡ್ಡ ವಿಷಯವೇನಲ್ಲ. ಹೀಗಾಗಿ ಟೀಮ್ ಇಂಡಿಯಾ ತಮ್ಮ ನಾಯಕತ್ವ ಪ್ರಕ್ರಿಯೆ ಬಗ್ಗೆ ಗಮನ ಹರಿಸಬೇಕಾಗುತ್ತದೆ,” ಎಂದು ಅಖ್ತರ್ ಹೇಳಿದ್ದಾರೆ.
ಇದನ್ನೂ ಓದಿ | Team India | ಟೀಮ್ ಇಂಡಿಯಾ ವಿಶ್ವದ ಅತ್ಯಂತ ಕಳಪೆ ಸೀಮಿತ ಓವರ್‌ಗಳ ತಂಡ ಎನ್ನುತ್ತಾರೆ ವಾನ್; ಕಾರಣ ಇಲ್ಲಿದೆ