Site icon Vistara News

ಟೀಮ್​ ಇಂಡಿಯಾದ ಬಗ್ಗೆ ವ್ಯಂಗ್ಯವಾಡಿದ ಪಾಕ್​ ಮಾಜಿ ಕ್ರಿಕೆಟಿಗ ಅಬ್ದುಲ್‌ ರಜಾಕ್‌

Abdul Razzaq Pakistani cricketer

ಕರಾಚಿ: ಕಳೆದ ವಾರವಷ್ಟೇ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ (Aishwarya Rai) ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್‌ ರಜಾಕ್‌(Abdul Razzaq) ಇದೀಗ ಟೀಮ್ ಇಂಡಿಯಾದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನ ಮಾಧ್ಯಮವೊಂದರಲ್ಲಿ ಮಾತನಾಡಿದ ರಜಾಕ್​, ಭಾರತ ತಂಡ ವಿಶ್ವಕಪ್ ಗೆಲ್ಲುವ ಅತಿಯಾದ ವಿಶ್ವಾಸದಲ್ಲಿದ್ದರು. ಆದರೆ ಫೈನಲ್​ನಲ್ಲಿ ಸೋಲು ಕಂಡರು. ಒಂದು ವೇಳೆ ಭಾರತ ಗೆದ್ದಿದರೆ ಅದು ಕ್ರಿಕೆಟ್‌ ಆಟದ ದುಃಖದ ದಿನವಾಗಿರುತ್ತಿತ್ತು. ಭಾರತ ಸೋಲುವ ಮೂಲಕ ನಿಜವಾದ ಕ್ರಿಕೆಟ್​ ಗೆದ್ದಿದೆ” ಎಂದು ಹೇಳಿದ್ದಾರೆ. ರಜಾಕ್​ ಅವರ ಈ ಹೇಳಿಕೆ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಷಮೆಯಾಚಿಸಿದ್ದ ರಜಾಕ್‌

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ಟೀಕಿಸುವ ಭರದಲ್ಲಿ ಅನಗತ್ಯವಾಗಿ ಐಶ್ವರ್ಯ ರೈ ಅವರ ಹೆಸರು ಪ್ರಸ್ತಾಪ ಮಾಡಿದ ಅಬ್ದುಲ್‌ ರಜಾಕ್‌ ವಿರುದ್ಧ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ, ವಿಡಿಯೊ ಪೋಸ್ಟ್‌ ಮಾಡಿರುವ ಅವರು ಕ್ಷಮೆಯಾಚಿಸಿದ್ದರು.

“ನಾನು ಅಬ್ದುಲ್‌ ರಜಾಕ್.‌ ಸುದ್ದಿಗೋಷ್ಠಿ ವೇಳೆ ಪಾಕಿಸ್ತಾನ ಕ್ರಿಕೆಟ್‌ ತರಬೇತಿ ಹಾಗೂ ಉದ್ದೇಶದ ಕುರಿತು ಮಾತನಾಡುತ್ತಿದ್ದೆ. ಆಗ ನಾನು ಬಾಯಿತಪ್ಪಿನಿಂದಾಗಿ ಐಶ್ವರ್ಯಾ ರೈ ಅವರ ಹೆಸರು ಪ್ರಸ್ತಾಪಿಸಿದೆ. ನಾನು ವೈಯಕ್ತಿಕವಾಗಿ ಅವರ ಕ್ಷಮೆ ಕೇಳುತ್ತೇನೆ. ನಾನು ಯಾರ ಭಾವನೆಗಳಿಗೂ ಧಕ್ಕೆ ತರುವ, ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ. ನಾನು ಬೇರೆ ಉದಾಹರಣೆ ಕೊಡಬೇಕಿತ್ತು. ಆದರೆ, ಅಚಾತುರ್ಯದಿಂದ ನಟಿಯ ಹೆಸರು ಪ್ರಸ್ತಾಪವಾಯಿತು” ಎಂದು 27 ಸೆಕೆಂಡ್‌ಗಳ ವಿಡಿಯೊವನ್ನು ಅಬ್ದುಲ್‌ ರಜಾಕ್‌ ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ Abdul Razzaq: ಐಶ್ವರ್ಯಾ ರೈ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಹೇಳಿಕೆ; ಬೆಂಡೆತ್ತಿದ ಬಳಿಕ ಕ್ಷಮೆಯಾಚನೆ

ಅಬ್ದುಲ್‌ ರಜಾಕ್‌ ಹೇಳಿದ್ದೇನು?

ಪಿಸಿಬಿಯ ಆಡಳಿತ ಮಂಡಳಿಯನ್ನು ಟೀಕಿಸುವಾಗ, ಅಬ್ದುಲ್ ಐಶ್ವರ್ಯಾ ರೈ ಅವರನ್ನು ಉದಾಹರಣೆಯಾಗಿ ಬಳಸಿದ್ದರು. ನಾನು ಐಶ್ವರ್ಯಾ ರೈಯನ್ನು ಮದುವೆಯಾಗುವುದರಿಂದ ಉತ್ತಮ ನಡತೆ ಮತ್ತು ಸದ್ಗುಣಶೀಲ ಮಕ್ಕಳು ಹುಟ್ಟುತ್ತವೆ ಎಂಬ ನಿರೀಕ್ಷೆ ಸುಳ್ಳು ಎಂಬ ಅಧಿಕಪ್ರಸಂಗದ ಮಾತನ್ನು ಹೇಳಿದ್ದರು. ಪಾಕಿಸ್ತಾನ ಕ್ರಿಕೆಟ್​ ಮಂಡಳಿಯೂ ಇದೇ ರೀತಿ ಒಳ್ಳೆಯ ಮಕ್ಕಳನ್ನು ಹುಟ್ಟಿಸುವ ಹುಸಿ ನಿರೀಕ್ಷೆಯಲ್ಲಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ರಜಾಕ್​ ಕಾಮೆಂಟ್ ಮಾಡಿದ್ದರು.

ಐಶ್ವರ್ಯಾ ರೈ ಅವರ ಕುರಿತು ಅಬ್ದುಲ್‌ ರಜಾಕ್‌ ಹೇಳಿಕೆ ನೀಡುತ್ತಲೇ ಭಾರತೀಯರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ನಟಿಯ ಅಭಿಮಾನಿಗಳಂತೂ ಅಬ್ದುಲ್‌ ರಜಾಕ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೂಡ ಅಬ್ದುಲ್‌ ರಜಾಕ್‌ ಹೇಳಿಕೆಯನ್ನು ಟೀಕಿಸಿದ್ದರು. ಇದರ ಬೆನ್ನಲ್ಲೇ ಅಬ್ದುಲ್‌ ರಜಾಕ್‌ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದಾಗ್ಯೂ, ಪಾಕ್‌ ಮಾಜಿ ಕ್ರಿಕೆಟಿಗನ ಹೇಳಿಕೆ ಕುರಿತು ಐಶ್ವರ್ಯಾ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Exit mobile version