ಚೆನ್ನೈ: ಕ್ರಿಕೆಟ್ ಕ್ಷೇತ್ರದಲ್ಲಿ ‘ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತಿ ಪಡೆದಿರುವ ಎಂಎಸ್ ಧೋನಿ (MS Dhoni ) ಭಾವೋದ್ವೇಗಕ್ಕೆ ಒಳಗಾಗುವುದಿಲ್ಲ. ತಮ್ಮ ಭಾವನೆಗಳನ್ನು ನಿಯಂತ್ರಿಸುವ ವ್ಯಕ್ತಿ ಎಂದೇ ಹೇಳಲಾಗುತ್ತಿದೆ. ಮೈದಾನದಲ್ಲಿ ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ ಧೋನಿ ತನ್ನ ಶಾಂತತೆಯನ್ನು ಕಳೆದುಕೊಳ್ಳುವುದಿಲ್ಲ. ಆಗಿದ್ದರೂ ಅದು ಬಹಳ ಅಪರೂಪ. ಧೋನಿಯ ಈ ವ್ಯಕ್ತಿತ್ವವು ಅವರನ್ನು ಮೈದಾನದಲ್ಲಿ ಅವರನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿ ಪರಿವರ್ತಿಸಿದೆ. ಇಂಥ ಧೋನಿ ಭಾವನೆಗಳನ್ನು ನಿಯಂತ್ರಣ ಮಾಡಲಾಗದೇ ಬಿಕ್ಕಿ ಬಿಕ್ಕಿ ಅಳುತ್ತಾರೆ ಎಂದು ಯಾರೂ ನಂಬಲಿಕ್ಕಿಲ್ಲ. ಆದರೆ, ಈಗ ನಂಬಲೇಬೇಕು. ಯಾಕೆಂದರೆ ಅವರ ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್ ಪ್ರಸಂಗವೊಂದರ ಮೂಲಕ ಧೋನಿ ಅತ್ತಿರುವ ಸಂದರ್ಭವನ್ನು ವಿವರಿಸಿದ್ದಾರೆ. ಅದಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಇಮ್ರಾನ್ ತಾಹಿರ್ ಧನಿ ಗೂಡಿಸಿದ್ದಾರೆ.
ಧೋನಿ ಬಗ್ಗೆ ಹರ್ಭಜನ್ ಸಿಂಗ್ ಮಾತನಾಡುವ ವೀಡಿಯೊವೊಂದನ್ನು ಸ್ಟಾರ್ ಸ್ಪೋರ್ಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. ಅದರಲ್ಲಿ ಧೋನಿ ಅತ್ತಿರುವ ಸಂದರ್ಭವನ್ನು ವಿವರಿಸಿದ್ದಾರೆ. ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಎರಡು ಋತುಗಳಿಂದ ಅಮಾನತುಗೊಂಡಿದ್ದ ಸಿಎಸ್ಕೆ ತಂಡ 2018ರಲ್ಲಿ ಮತ್ತೆ ಐಪಿಎಲ್ಗೆ ಮರಳಿತ್ತು. ಈ ವೇಳೆ ಡ್ರೆಸಿಂಗ್ ರೂಮ್ನಲ್ಲಿ ಆಟಗಾರರು ಒಟ್ಟು ಸೇರಿದ್ದಾಗ ಭಾವನೆ ನಿಯಂತ್ರಣ ಮಾಡಲು ಸಾಧ್ಯವಾಗದೇ ಧೋನಿ ಕಣ್ಣೀರು ಹಾಕಿದ್ದರಂತೆ.
ಸಿಎಸ್ಕೆ ಮಾಜಿ ಸ್ಪಿನ್ನರ್ ಇಮ್ರಾನ್ ತಾಹಿರ್ ಕೂಡ ಹರ್ಭಜನ್ ಅವರೊಂದಿಗೆ ಸೇರಿಕೊಂಡು ಪ್ರಸಂಗವನ್ನು ಪುಷ್ಟಿಕರಿಸಿದರು. ತಂಡವು ಧೋನಿಗೆ ಎಷ್ಟು ಹತ್ತಿರದಲ್ಲಿದೆ ಎಂದು ತಿಳಿದ ಕ್ಷಣ ಇದು ಎಂದು ಅವರು ಹೇಳಿದ್ದಾರೆ.
ನಾನು ಹಂಚಿಕೊಳ್ಳಲು ಬಯಸುವ ಒಂದು ಕಥೆ ಇದೆ. 2018ರಲ್ಲಿ, 2ವರ್ಷಗಳ ನಿಷೇಧದ ನಂತರ ಸಿಎಸ್ಕೆ ಈ ಲೀಗ್ಗೆ ಮರಳಿದಾಗ ತಂಡದ ಔತಣಕೂಟವಿತ್ತು. ‘ಪುರುಷರು ಅಳುವುದಿಲ್ಲ’ ಎಂಬ ಮಾತನ್ನು ನಾನು ಕೇಳಿದ್ದೆ. ಆದರೆ ಎಂಎಸ್ ಧೋನಿ ಆ ರಾತ್ರಿ ಅಳುತ್ತಿದ್ದರು. ಅವರು ಭಾವುಕರಾದರು. ಈ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ಸರಿಯೇ ಇಮ್ರಾನ್ (ತಾಹಿರ್) ಎಂದು ಹರ್ಭಜನ್ ಸಿಂಗ್ ಪ್ರಶ್ನಿಸಿದ್ದರು.
ಇದನ್ನೂ ಓದಿ: Taekwondo Premier League : ಬಂತು ಐಪಿಎಲ್ ರೀತಿ ಟೇಕ್ವಾಂಡೋ ಪ್ರೀಮಿಯರ್ ಲೀಗ್!
ಹೌದು, ಖಂಡಿತ, “ನಾನು ಕೂಡ ಅಲ್ಲಿದ್ದೆ. ಅದು ಅವರಿಗೆ (ಎಂಎಸ್ ಧೋನಿ) ತುಂಬಾ ಭಾವನಾತ್ಮಕ ಕ್ಷಣವಾಗಿತ್ತು. ಅವರನ್ನು ಆ ರೀತಿ ನೋಡಿದಾಗ, ಈ ತಂಡವು ಅವರ ಹೃದಯಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದು ನನಗೆ ತಿಳಿಯಿತು. ಅವರು ತಂಡವನ್ನು ತಮ್ಮ ಕುಟುಂಬವೆಂದು ಪರಿಗಣಿಸುತ್ತಾರೆ. ಇದು ನಮ್ಮೆಲ್ಲರಿಗೂ ತುಂಬಾ ಭಾವನಾತ್ಮಕ ಕ್ಷಣವಾಗಿತ್ತು ಎಂದು ಹೇಳಿದ್ದಾರೆ.
ನಾವು 2 ವರ್ಷಗಳ ನಂತರ ಹಿಂತಿರುಗಿ ಟ್ರೋಫಿಯನ್ನು ಗೆದ್ದಿದ್ದೇವೆ. ಜನರು ನಮ್ಮ ತಂಡಕ್ಕೆ ‘ಬುದ್ಧೆ’ (ಮುದುಕರು) ಎಂಬ ಟ್ಯಾಗ್ ನೀಡಿದಾಗ, ಮತ್ತು ನಾನು ಸಹ ಆ ಋತುವಿನಲ್ಲಿ ತಂಡದಲ್ಲಿದ್ದೆ, ಆದರೆ ನಾವು ಪ್ರಶಸ್ತಿಯನ್ನು ಗೆದ್ದಿದ್ದೇವೆ. ಆ ಗೆಲುವಿನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದು ತಾಹಿರ್ ಹೇಳಿದ್ದಾರೆ.