ಕೊಲಂಬೊ: ಶ್ರೀಲಂಕಾ ಮಾಜಿ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ(Sachithra Senanayake) ಅವರನ್ನು ಮ್ಯಾಚ್ ಫಿಕ್ಸಿಂಗ್(match fixing) ಆರೋಪದ ಮೇಲೆ ಬುಧವಾರ ಬಂಧಿಸಲಾಗಿದೆ. ಕ್ರೀಡಾ ಭ್ರಷ್ಟಾಚಾರ ತನಿಖಾ ದಳದ ಪೊಲೀಸರು ಅವರಿನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮೂರು ವಾರಗಳ ಹಿಂದೆ ಅವರಿಗೆ ನ್ಯಾಯಾಲಯವು ವಿದೇಶ ಪ್ರಯಾಣವನ್ನು ನಿಷೇಧಿಸಿತು. ಇದೀಗ ಅವರ ಬಂಧನವಾಗಿದೆ.
ಲಂಕಾ ಪ್ರೀಮಿಯರ್ ಲೀಗ್ (LPL) ನ 2020ರ ಆವೃತ್ತಿಯಲ್ಲಿ ಸೇನಾನಾಯಕೆ ಅವರು ಇಬ್ಬರು ಆಟಗಾರರಿಗೆ ಫಿಕ್ಸಿಂಗ್ ನಡೆಸಲು ಪ್ರಚೋದಿಸಿದ್ದಾರೆ ಎಂದು ಆರೋಪದಲ್ಲಿ ತಿಳಿದುಬಂದಿದೆ. 38 ವರ್ಷದ ಅವರು 2012 ಮತ್ತು 2016 ರ ನಡುವೆ ಶ್ರೀಲಂಕಾ ಪರ ಒಂದು ಟೆಸ್ಟ್, 49 ಏಕದಿನ ಮತ್ತು 24 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂರು ತಿಂಗಳ ಅವಧಿಗೆ ಜಾರಿಯಲ್ಲಿರುವ ಪ್ರಯಾಣ ನಿಷೇಧವನ್ನು ವಿಧಿಸಿದೆ. ಮಾಜಿ ಆಫ್ ಸ್ಪಿನ್ನರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕವು ಜನರಲ್ ಇಲಾಖೆಗೆ ಸೂಚನೆ ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಇದನ್ನೂ ಓದಿ Fifa World Cup | ವಿಶ್ವ ಕಪ್ ಪಂದ್ಯ ಆರಂಭಕ್ಕೂ ಮುನ್ನವೇ ಮ್ಯಾಚ್ ಫಿಕ್ಸಿಂಗ್ ಮಾಡೀತೇ ಕತಾರ್!
ಕೆಕೆಆರ್ ತಂಡದಲ್ಲಿಯೂ ಆಡಿದ್ದರು
ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಯೂ(IPL) ಸೇನಾನಾಯಕೆ ಆಡಿದ್ದರು. ಕೆಕೆಆರ್(KKR) ತಂಡದಲ್ಲಿ ಆಡಿದ್ದ ಅವರು ಒಟ್ಟು 8 ಪಂದ್ಯಗಳನ್ನು ಆಡಿದ್ದರು. 2013ರಲ್ಲಿ ಸನ್ರೈಸರ್ಸ್ ಹೈದರಾಬಾದ್(SRH) ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಪದಾರ್ಪಣೆ ಮಾಡಿದ್ದರು. ಅಚ್ಚರಿ ಎಂದರೆ ಈ ಆವೃತ್ತಿಯ ಬಳಿಕ ಅವರು ಐಪಿಎಲ್ ಆಡಿಲ್ಲ. ಒಟ್ಟು 9 ವಿಕೆಟ್ ಮತ್ತು 10 ರನ್ ಬಾರಿಸಿದ್ದಾರೆ. ಲಂಕಾ ಪರ 49 ಏಕದಿನದಿಂದ 56 ರನ್, 53 ವಿಕೆಟ್ ಕೆಡವಿದ್ದಾರೆ. 24 ಟಿ20 ಪಂದ್ಯದಿಂದ 56 ರನ್, 25 ವಿಕೆಟ್ ಪಡೆದಿದ್ದಾರೆ.
ಶ್ರೀಲಂಕಾದ ದೇಶೀಯ ಕ್ರಿಕೆಟ್ನಲ್ಲಿ ಸೇನಾನಾಯಕೆ ಅವರು 112 ಪ್ರಥಮ ದರ್ಜೆ ಪಂದ್ಯಗಳಲ್ಲಿ 567 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಅವರ ಬೌಲಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಆದಾಗ್ಯೂ, ಈ ವಿವಾದ ಅವರ ಸಾಧನೆಗೆ ಕಳಂಕ ತಂದಿದೆ.