ಮುಂಬಯಿ : ಐಪಿಎಲ್ ೧೬ನೇ ಆವೃತ್ತಿ ನಿಧಾನವಾಗಿ ಕಳೆಗಟ್ಟುತ್ತಿದ್ದು, ಡಿಸೆಂಬರ್ ೧೬ರಂದು ಬೆಂಗಳೂರಿನಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬುದಾಗಿ ವರದಿಯಾಗಿದೆ. ಏತನ್ಮಧ್ಯೆ, ನವೆಂಬರ್ ೧೫ರೊಳಗೆ ತಮ್ಮಲ್ಲೇ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನೀಡುವಂತೆ ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚನೆ ನೀಡಿದೆ. ಹೀಗಾಗಿ ಇನ್ನೊಂದು ತಿಂಗಳ ಒಳಗೆ ಐಪಿಎಲ್ ಆಟಗಾರರ ಭವಿಷ್ಯ ಏನೆಂಬುದು ಗೊತ್ತಾಗಲಿದೆ.
ಹರಾಜಿಗೆ ಮೊದಲು ಫ್ರಾಂಚೈಸಿಗಳು ತಾವು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗುತ್ತದೆ. ಆ ಆಟಗಾರರ ಹೆಸರನ್ನು ಮೂಲ ಬೆಲೆ ಸಮೇತ ಐಪಿಎಲ್ ಆಡಳಿತ ಮಂಡಳಿ ಹರಾಜು ಪಟ್ಟಿಯಲ್ಲಿ ಸೇರಿಸುತ್ತದೆ. ಅದಕ್ಕೆ ನವೆಂಬರ್ ೧೫ ಕೊನೇ ದಿನ ಎಂದು ಬಿಸಿಸಿಐ ಹೇಳಿದೆ.
ಮುಂದಿನ ಆವೃತ್ತಿಗೆ ಆಟಗಾರರ ಖರೀದಿ ಹೂಡಿಕೆ ಮೊತ್ತವನ್ನು ಹೆಚ್ಚಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಅದು ೯೦ ಕೋಟಿ ರೂಪಾಯಿ ಇತ್ತು. ಮುಂದಿನ ಆವೃತ್ತಿಗೆ ೯೫ ಕೋಟಿ ರೂಪಾಯಿ. ಹೀಗಾಗಿ ತಮಗೆ ಬೇಡವೆನಿಸಿರುವ ಆಟಗಾರರನ್ನು ತಂಡದಿಂದ ಬಿಟ್ಟಾಗ ಉಳಿಯುವ ಮೊತ್ತದಲ್ಲಿ ಬೇರೆ ಅಟಗಾರರನ್ನು ಖರೀದಿ ಮಾಡಬಹುದು. ನವೆಂಬರ್ ೧೫ರಂದು ಆಟಗಾರರ ಬಿಡುಗಡೆ ಪಟ್ಟಿ ಪ್ರಕಟಗೊಂಡಾಗ ಉಳಿದ ಮೊತ್ತವೂ ತಿಳಿದು ಬರಲಿದೆ.
ಮೂಲವೊಂದರ ಪ್ರಕಾರ ಫ್ರಾಂಚೈಸಿಗಳು ೧೫ ಪ್ರಮುಖ ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ಬಿಡುಗಡೆ ಮಾಡಲಿದೆ.
ಕಳೆದ ವರ್ಷ ಎಷ್ಟು ಉಳಿದಿತ್ತು?
ಕಳೆದ ವರ್ಷದ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಅನುಕ್ರಮವಾಗಿ ೩.೪೫ ಕೋಟಿ ರೂಪಾಯಿ ಹಾಗೂ ೨.೯೫ ಕೋಟಿ ರೂಪಾಯಿ ಉಳಿಸಿಕೊಂಡಿತ್ತು. ಡೆಲ್ಲಿ, ಮುಂಬಯಿ ಹಾಗೂ ಹೈದರಾಬಾದ್ ತಂಡಗಳ ಬಳಿ ೧೦ ಲಕ್ಷ ರೂಪಾಯಿ ಉಳಿದಿತ್ತು. ಗುಜರಾತ್ ತಂಡ ೧೫ ಲಕ್ಷ ರೂ. ಉಳಿಸಿಕೊಂಡಿದ್ದರೆ, ಕೋಲ್ಕೊತಾ ನೈಟ್ ರೈಡರ್ಸ್ ತಂಡ ೪೫ ಲಕ್ಷ ರೂಪಾಯಿ ಹಾಗೂ ರಾಜಸ್ಥಾನ್ ಹಾಗೂ ಬೆಂಗಳೂರು ಫ್ರಾಂಚೈಸಿ ತಲಾ ೯೫ ಲಕ್ಷ ರೂಪಾಯಿ ಹಾಗೂ ೧.೫೫ ಕೋಟಿ ರೂಪಾಯಿ ಉಳಿಸಿಕೊಂಡಿತ್ತು.
ಇದನ್ನೂ ಓದಿ | IPL 2023 | ಐಪಿಎಲ್ 2023ನೇ ಆವೃತ್ತಿಗೆ ಡಿಸೆಂಬರ್ 16ರಂದು ಬೆಂಗಳೂರಿನಲ್ಲಿ ಮಿನಿ ಹರಾಜು?