Site icon Vistara News

French Open 2022 | ಕ್ಯಾಸ್ಪರ್‌ ನಡು ಮುರಿದು 14ನೇ ಬಾರಿ ಚಾಂಪಿಯನ್‌ ಆದ ನಡಾಲ್!‌

French Open 2022

French Open 2022: ಆಹಾ! ಎಷ್ಟೊಂದು ಸಂಭ್ರಮ! ರಾಫೆಲ್ ನಡಾಲ್‌ 14ನೇ ಬಾರಿ ಫ್ರೆಂಚ್‌ ಓಪನ್ ಚಾಂಪಿಯನ್‌ ಆಗಿರುವ ಒಂದು ಸುಂದರ ಘಳಿಗೆಗೆ ಇಂದು ವಿಶ್ವ ಸಾಕ್ಷಿಯಾಗಿದೆ. ನಡಾಲ್‌ ಅವರದು ಎಂಥ ಅದ್ಭುತ ಪ್ರದರ್ಶನ! ಕ್ಯಾಸ್ಪರ್‌ ರುಡ್‌ ವಿರುದ್ಧ ಮೂರು ಸೆಟ್‌ನಲ್ಲಿ ಅತ್ಯದ್ಭುತ ಗೆಲುವು ಸಾಧಿಸಿದ್ದಾರೆ. ಇಂದಿನ ಪಂದ್ಯದಲ್ಲಿ ನಡಾಲ್‌ ʼನಾನೇ ಚಾಂಪಿಯನ್‌ʼ ಎನ್ನುವ ಆತ್ಮವಿಶ್ವಾಸದಲ್ಲಿ ಆಟವನ್ನು ಪ್ರದರ್ಶಿಸಿದಂತಿತ್ತು.

ಕ್ಯಾಸ್ಪರ್‌ ರುಡ್‌ ವಿರುದ್ಧ‌ ನಡಾಲ್ 6-3, 6-3, 6-0 ಲೀಡ್‌ನಲ್ಲಿ ಫೈನಲ್‌ ಪಂದ್ಯವನ್ನು ತಮ್ಮದಾಗಿಸಿಕೊಂಡರು. ರಾಫೆಲ್‌ ನಡಾಲ್‌ ಈವರೆಗೆ ಒಟ್ಟು 22 ಗ್ರಾಂಡ್‌ ಸ್ಲಾಮ್‌ ಚಾಂಪಿಯನ್‌ ಆಗಿ ದಾಖಲೆ ಬರೆದಿದ್ದಾರೆ. ರೋಜರ್‌ ಫೆಡರರ್‌ ಹಾಗೂ ನೊವಾಕ್‌ ಜಾಕೊವಿಕ್‌ ತಲಾ 20 ಗ್ರ್ಯಾನ್‌ಸ್ಲಾಮ್‌ ಗೆದ್ದಿದ್ದಾರೆ.

ಹೇಗಿತ್ತು ಇಂದಿನ ಪಂದ್ಯ?

ಸೆಟ್‌ 1: ಇಂದಿನ ಪಂದ್ಯವನ್ನು ನಡಾಲ್‌ ಮೊದಲು ಸರ್ವ್‌ ಮಾಡಿ ಆರಂಭಿಸಿದರು. ಆರಂಭದಿಂದಲೇ ನಡಾಲ್‌ ಗೇಮನ್ನು ತಮ್ಮತ್ತ ಹಿಡಿಡಿಟ್ಟುಕೊಂಡಿದ್ದರು. ಎದುರಾಳಿಗೆ ಅಂಕವನ್ನು ಪಡೆಯಲು ಅವಕಾಶ ನೀಡದೇ ಮುನ್ನುಗ್ಗುತ್ತಿದ್ದರು. ಸತತ 3 ಬಾರಿ ರುಡ್‌ ಸರ್ವೀಸ್‌ ಬ್ರೇಕ್‌ ಮಾಡಿದ್ದಲ್ಲದೆ 5-2 ಲೀಡ್‌ ಪಡೆದರು. 48 ನಿಮಿಷಗಳ ಕಾಲ ನಡೆದ ಮೊದಲ ಸೆಟ್‌ನಲ್ಲಿ ನಡಾಲ್‌ 6-3 ಅಂತರದ ಗೆಲುವು ಸಾಧಿಸಿದರು.

ಸೆಟ್‌ 2: ಎರಡನೇ ಸೆಟ್‌ನಲ್ಲಿ ರುಡ್‌ ಉತ್ತಮ ಸರ್ವ್‌ನಿಂದ ಆಟ ಆರಂಭಿಸಿದರು. ಆದರೆ ಈ ಸೆಟ್‌ ಗೆಲ್ಲಲು ಕೂಡ ನಡಾಲ್‌ಗೆ ಹೆಚ್ಚು ಸಮಯ ಹಿಡಿಯಲಿಲ್ಲ. ನಡಾಲ್‌ 51 ನಿಮಿಷದಲ್ಲಿ 6-3 ಲೀಡ್‌ ಪಡೆದು ರುಡ್‌ಗೆ ಸೋಲುಣಿಸಿದರು.
ಸೆಟ್‌ 3: 13 ಬಾರಿ ಚಾಂಪಿಯನ್‌ ಆಗಿರುವ ನಡಾಲ್‌ ಹಾಗೂ ವರ್ಲ್ಡ್‌ ನಂ. 8 ರುಡ್‌ ನಡುವೆ ಇದೊಂದು ರೋಚಕ ಪಂದ್ಯವಾಯಿತು. ನಡಾಲ್‌ ಆಟದ ಆರಂಭವನ್ನು ನೋಡಿದಾಗ ಮ್ಯಾಚ್‌ ಮುಗಿಯುವ ಮುನ್ನವೇ ಫಲಿತಾಂಶ ತಿಳಿದಿತ್ತು. ಆದರೆ, ಮ್ಯಾಚ್‌ ಯಾವ ರೀತಿಯೂ ಟರ್ನ್‌ ಆಗಬಹುದು ಎಂಬ ಕುತೂಹಲವೇ ಮ್ಯಾಚ್‌ ನೋಡಲು ಪ್ರೇರಣೆಯಾಗಿತ್ತು. ಗೆಲ್ಲುವ ಹುಮ್ಮಸ್ಸಿನಲ್ಲಿ ಆಡಿದ ನಡಾಲ್‌ ಈ ಸೆಟ್‌ನಲ್ಲಿ ಒಂದೇ ಒಂದು ಅಂಕವನ್ನೂ ರುಡ್‌ಗೆ ಬಿಟ್ಟು ಕೊಡಲಿಲ್ಲ. ಸುಮಾರು ಅರ್ಧ ಗಂಟೆಯೊಳಗೆ ನಡಾಲ್‌ ಪಂದ್ಯವನ್ನು ಮುಗಿಸಿಬಿಟ್ಟರು. ನಡಾಲ್‌ 6-0 ಅಂತರದಲ್ಲಿ ಮೂರನೇ ಸೆಟ್‌ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದರು.

ಫೈನಲ್‌ ಪಂದ್ಯದ ಫೈನಲ್‌ ಸೆಟ್‌ ಇದಕ್ಕಿಂತ ರೋಚಕ ಬೇಕೆ? 14 ಬಾರಿ ಫ್ರೆಂಚ್‌ ಓಪನ್‌ ಚಾಂಪಿಯನ್‌, 22 ಬಾರಿ ಗ್ರಾಂಡ್‌ ಸ್ಲಾಮ್‌ ಚಾಂಪಿಯನ್‌ ನಡಾಲ್‌ ಇಂದು ಸಡಗರದ ಉತ್ತುಂಗದಲ್ಲಿದ್ದಾರೆ. ನಡಾಲ್‌ ಅಭಿಮಾನಿಗಳಿಗೂ ಇದು ಅತ್ಯಂತ ಸಂಭ್ರಮದ ಸಮಯವಾಗಿದೆ.

ಇದನ್ನೂ ಓದಿ: French Open 2022 | ಜ್ವೆರೆವ್‌ಗೆ ಗಾಯದ ಜ್ವರ, 14ನೇ ಬಾರಿ ಫ್ರೆಂಚ್‌ ಫೈನಲ್‌ ಪ್ರವೇಶಿಸಿದ ನಡಾಲ್

Exit mobile version