Site icon Vistara News

French Open: ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ನಿರಾಸೆ

French Open

ಪ್ಯಾರಿಸ್‌: ಫ್ರೆಂಚ್​ ಓಪನ್​ ಟೆನಿಸ್​ ಟೂರ್ನಿಯಲ್ಲಿ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌, ಫ್ಯಾಬಿಯೊ ಫೊಗಿನಿ, ಅನ್ನಾ ಬ್ಲಿಂಕೋವಾ, ದರಿಯಾ ಕಸತ್ಕಿನಾ, ಎಲೆನಾ ಸ್ವಿಟೋಲಿನಾ ದ್ವಿತೀಯ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಿಶ್ವದ ನಂ.2 ಆಟಗಾರ ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಬ್ರಝಿಲ್‌ನ ಅರ್ಹತಾ ಆಟಗಾರ ಥಿಯಾಗೊ ಸೆಬೋತ್‌ ವೈಲ್ಡ್‌ ಅವರು 5 ಸೆಟ್‌ಗಳ ಜಿದ್ದಾಜಿದ್ದಿ ಕಾಳಗದಲ್ಲಿ 7-6 (7-5), 6-7 (6-8), 2-6, 6-3, 6-4 ಅಂತರದಿಂದ ಡ್ಯಾನಿಲ್‌ ಮೆಡ್ವೆಡೇವ್‌ ಅವರನ್ನು ಪರಾಭವಗೊಳಿಸಿದರು. ವೈಲ್ಡ್‌ ಪಾಲಿಗೆ ಇದು ದೊಡ್ಡ ಗೆಲುವಾಗಿದೆ. ಆವೆಯಂಗಳದಲ್ಲಿ ಅವರು ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಇದೇ ಋತುವಿನಲ್ಲಿ ಕ್ಲೇ ಕೋರ್ಟ್‌ನಲ್ಲಿ 2 ಚಾಲೆಂಜರ್‌ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಡೆನ್ಮಾರ್ಕ್‌ನ 6ನೇ ಶ್ರೇಯಾಂಕದ ಹೋಲ್ಜರ್‌ ರೂನ್‌ ಮೊದಲ ಸುತ್ತಿನಲ್ಲಿ ಪ್ರಯಾಸದ ಗೆಲುವು ಸಾಧಿಸಿದರು. ಮೊದಲ ಸಲ ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ಆಡಲಿಳಿದ ಕ್ರಿಸ್ಟೋಫ‌ರ್‌ ಯುಬ್ಯಾಂಕ್ಸ್‌ ವಿರುದ್ಧ 4 ಸೆಟ್‌ಗಳ ಕಾದಾಟದಲ್ಲಿ 6-4, 3-6, 7-6 (7-2), 6-2. ಅಂತರದಿಂದ ಗೆದ್ದರು.

ಸ್ಟೆಫ‌ನಸ್‌ ಸಿಸಿಪಸ್‌ ಅವರು ತಮ್ಮ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ರಾಬರ್ಟೊ ಕಾರ್ಬಲ್ಲೆಸ್‌ ಬೇನ ಅವರನ್ನು 6-3, 7-6 (4), 6-2ರಿಂದ ಮಣಿಸಿದರು. ಮಹಿಳಾ ವಿಭಾಗದ ಸಿಂಗಲ್ಸ್​ನಲ್ಲಿ ಹಾಲಿ ಚಾಂಪಿಯನ್‌, ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್‌ ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ಅವರನ್ನು 6-4, 6-0 ನೇರ​ ಸೆಟ್​ ಅಂತರದಿಂದ ಸೋಲಿಸಿದರು. ಕ್ಯಾಮಿಲಾ ಜಾರ್ಜಿ ಗಾಯಾಳಾಗಿ ಹಿಂದೆ ಸರಿದ ಕಾರಣ ಅಮೆರಿಕದ ಜೆಸ್ಸಿಕಾ ಪೆಗುಲಾ ಮೊದಲ ಸುತ್ತು ದಾಟಿದರು. ಪೆಗುಲಾ 6-2ರಿಂದ ಮೊದಲ ಸೆಟ್‌ ವಶಪಡಿಸಿಕೊಂಡಿದ್ದರು. ದ್ವಿತೀಯ ಸೆಟ್​ ವೇಳೆ ಕ್ಯಾಮಿಲಾ ಜಾರ್ಜಿ ಗಾಯದಿಂದಾಗಿ ಹೊರನಡೆದರು.

ಇದನ್ನೂ ಓದಿ French Open 2023: ಭಾರತದ ಮೂವರ ಸ್ಪರ್ಧೆ

ಭಾರತೀಯರಿಗೆ ಸೋಲು

ಭಾರತದ ಶ್ರೀರಾಮ್‌ ಬಾಲಾಜಿ-ಜೀವನ್‌ ನೆಡುಂಶೆಜಿಯನ್‌ ಅವರು ಪುರುಷರ ಡಬಲ್ಸ್‌ನಲ್ಲಿ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ನಿರಾಸೆ ಮೂಡಿಸಿದರು. ಬೆಲರೂಸ್‌ನ ಇಲ್ಯ ಇವಾಶ್ಕ-ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್‌ 6-3, 6-4 ಅಂತರದ ಸೋಲು ಕಂಡರು.

Exit mobile version