ಪ್ಯಾರಿಸ್: ಅತ್ಯಂತ ಜಿದ್ದಾಜಿದ್ದಿನಿಂದ ಸಾಗುತ್ತಿರುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ರಷ್ಯಾದ ಕರೆನ್ ಕಶನೋವ್ ಮತ್ತು ನೊವಾಕ್ ಜೊಕೋವಿಕ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ರಷ್ಯಾದ ಕರೆನ್ ಕಶನೋವ್ ಅವರು ಕ್ವಾರ್ಟರ್ ಫೈನಲ್ ಟಿಕೆಟ್ ಪಡೆಯುವ ಮೂಲಕ 2023ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಆಟಗಾರ ಎನಿಸಿಕೊಂಡರು.
ಭಾನುವಾರ ನಡೆದ 16ರ ಸುತ್ತಿನ ಸ್ಪರ್ಧೆಯಲ್ಲಿ ಕರೆನ್ ಕಶನೋವ್ ಇಟಲಿಯ ಲೊರೆಂಜೊ ಸೊನೆಗೊ ವಿರುದ್ಧ 1-6, 6-4, 7-6 (9-7), 6-1 ಅಂತರದಿಂದ ಗೆಲುವು ಸಾಧಿಸಿದರು. ರಷ್ಯಾದ 11ನೇ ಶ್ರೇಯಾಂಕದ ಆಟಗಾರನಾಗಿರುವ ಕರೆನ್ ಕಶನೋವ್ ಮೊದಲ ಸೆಟ್ ಕಳೆದುಕೊಂಡರೂ ಆ ಬಳಿಕ ಬಲಿಷ್ಠ ಸರ್ವ್ಗಳ ಮೂಲಕ ಮೇಲುಗೈ ಸಾಧಿಸಿದರು. ಮುಂದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೂರ್ನಿಯ ಫೇವರಿಟ್ ಆಟಗಾರನಾಗಿರುವ ಅನುಭವಿ ನೊವಾಕ್ ಜೊಕೋವಿಕ್ ಸವಾಲು ಎದುರಿಸಬೇಕಿದೆ.
ದಾಖಲೆ ಬರೆದ ಜೊಕೋ
23ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಚಿತ್ತ ನೆಟ್ಟಿರುವ ಸರ್ಬಿಯಾದ ನೋವಾಕ್ ಜೋಕೋವಿಕ್ ಅವರು ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿಸುವ ಮೂಲಕ ಆವೇ ಅಂಗಣದ ರಾಜ ಸ್ಪೇನ್‌ನ ರಫೆಲ್ ನಡಾಲ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ರಫೆಲ್ ನಡಾಲ್ ಅವರು 16 ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದು ಇದುವರೆಗೆ ಅಗ್ರ ಸ್ಥಾನದಲ್ಲಿದ್ದರು. ಆದರೆ ಜೊಕೋ ಈ ಬಾರಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗೇರುವ ಮೂಲಕ 17ನೇ ಬಾರಿ ಈ ಸಾಧನೆ ಮಾಡಿದ ದಾಖಲೆಯೊಂದಿಗೆ ನಡಾಲ್ ಅವರನ್ನು ಹಿಂದಿಕ್ಕಿದರು. ಸದ್ಯ ನಡಾಲ್ ಮತ್ತು ಜೋಕೊ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದು ಜಂಟಿ ದಾಖಲೆ ಹೊಂದಿದ್ದಾರೆ. ಈ ಬಾರಿ ನಡಾಲ್ ಗಾಯದಿಂದಾಗಿ ಟೂರ್ನಿಯಲ್ಲಿ ಆಡುತ್ತಿಲ್ಲ. ಒಂದೊಮ್ಮೆ ಜೊಕೋ ಚಾಂಪಿಯನ್ ಪಟ್ಟ ಅಲಂಕರಿಸಿದರೆ ದಾಖಲೆಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದ ಆಟಗಾರನಾಗಿ ಮೂಡಿಬರಲಿದ್ದಾರೆ. ಭಾನುವಾರದ ಪಂದ್ಯದಲ್ಲಿ ಜೊಕೋವಿಕ್ ಪೆರುವಿನ ಜುವಾನ್ ಪಾಬ್ಲೊ ವರಿಲ್ಲಸ್ ವಿರುದ್ಧ 6-3, 6-2, 6-2 ಅಂತರದಿಂದ ಗೆಲುವು ದಾಖಲಿಸಿದರು.
ಇದನ್ನೂ ಓದಿ French Open: ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ನಿರಾಸೆ
ಮಹಿಳಾ ವಿಭಾದ ಪಂದ್ಯದಲ್ಲಿ ಅನಸ್ತಾಸಿಯಾ ಪಾವುಚೆಂಕೋವಾ ಬೆಲ್ಜಿಯಂನ ಎಲೈಸ್ ಮಾರ್ಟೆನ್ಸ್ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 3-6, 7-6 (7-3), 6-3ರಿಂದ ಮೇಲುಗೈ ಸಾಧಿಸಿದರು. ಉಭಯ ಆಟಗಾರ್ತಿಯರ ಈ ಹೋರಾಟ 3 ಗಂಟೆ, 9 ನಿಮಿಷಗಳ ತನಕ ಸಾಗಿತು.